ವೀರಾಜಪೇಟೆ, ಮಾ. 23: ನೇರ ನಡೆನುಡಿ ಪ್ರಖರ ವ್ಯಕ್ತಿತ್ವದಿಂದ ಕನ್ನಡಿಗರನ್ನು ಪ್ರಭಾವಿಸಿದ್ದ ಕನ್ನಡ ಸಾರಸ್ವತ ಲೋಕದ ದಿಗ್ಗಜ ನಾಡೋಜ ಪಾಟೀಲ ಪುಟ್ಟಪ್ಪ ಅವರು ಸಾಹಿತ್ಯ ಮತ್ತು ಪತ್ರಿಕಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಎಂದು ಅವರ ಅಗಲಿಕೆಗೆ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸಿದರು. ಪುರಭವನದಲ್ಲಿ ತಾ. 18 ರಂದು ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪಾಟೀಲ್ ಪುಟ್ಟಪ ಅವರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಾದಂಡ ಎಸ್. ಪೂವಯ್ಯ ಮಾತನಾಡಿ, ಪುಟ್ಟಪ್ಪ ಅವರು ಕೊಡಗು ಜಿಲ್ಲೆಯ ಅಭಿವೃದ್ಧಿ ಬಗ್ಗೆ ರಾಜ್ಯ ಮಟ್ಟದಲ್ಲಿ ಧ್ವನಿ ಎತ್ತಿದ್ದರು. ವಿದ್ಯಾರ್ಥಿ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಗಾಂಧೀಜಿಯ ಅನುಯಾಯಿಯಾಗಿ ಹೋರಾಟ ನಡೆಸಿ ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಂಡು ಅಪರಿಮಿತ ಸೇವೆ ಸಲ್ಲಿಸಿದ ಮಹಾನ್ ಚೇತನರಾಗಿದ್ದರು ಎಂದು ಹೇಳಿದರು.

ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ, ಕನ್ನಡ ನಾಡಿನ ಹಿತಕ್ಕಾಗಿ ಹಲವಾರು ಹೋರಾಟದಲ್ಲಿ ತೊಡಗಿಸಿಕೊಂಡು ಕನ್ನಡ ನಾಡಿಗೆ ಮಹತ್ವದ ಕೊಡುಗೆ ನೀಡಿದವರು ಪಾಟೀಲ್ ಪುಟ್ಟಪ್ಪ. ವಕೀಲರಾಗಿ ಸೇವೆಸಲ್ಲಿಸಿ, ವಿದೇಶದಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಪ್ರಪಂಚ ಪತ್ರಿಕೆ ಮೂಲಕ ಪತ್ರಿಕೋದ್ಯಮ ಕ್ಷೇತ್ರಕ್ಕೂ ಕೊಡುಗೆ ನೀಡಿದರು. ಇವರು ಸದಾ ಜನ ಮಾನಸದಲ್ಲಿ ಉಳಿಯವ ವ್ಯಕ್ತಿಯಾಗಿದ್ದಾರೆ ಎಂದು ಸ್ಮರಿಸಿದರು.

ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿ ನಳಿನಾಕ್ಷಿ, ಜಿಲ್ಲಾ ಸಮಿತಿ ಸದಸ್ಯ ಪಾರ್ಥ ಚಿಣ್ಣಪ್ಪ, ಅಮ್ಮತ್ತಿ ಹೋಬಳಿ ಘಟಕದ ಅಧ್ಯಕ್ಷ ಜಾನ್ಸನ್, ಮಾಧ್ಯಮ ಕಾರ್ಯದರ್ಶಿ ಕಾಂಗೀರ ಬೋಪಣ್ಣ, ಸದಸ್ಯರಾದ ಅಮ್ಮಣಿಚಂಡ ಪ್ರವೀಣ್, ಪಿ.ಎಸ್. ವೈಲೆಶ್ ಕಾವೇರಿ ಕಾಲೇಜಿನ ಉಪನ್ಯಾಸಕಿ ಡಾ. ರೇವತಿ ಪೂವಯ್ಯ, ಪ.ಪಂ. ಸದಸ್ಯರಾದ ಹರ್ಷವರ್ಧನ, ಸುನಿತಾ, ಮಹದೇವ ಮತ್ತಿತರರು ಉಪಸ್ಥಿತರಿದ್ದರು.