ಮಡಿಕೇರಿ, ಮಾ. 23: ರಾಜ್ಯ ಸರ್ಕಾರದ ವಸತಿ ಇಲಾಖೆಯ ಅನುಷ್ಠಾನಗೊಳಿಸುತ್ತಿರುವ ಬಸವ ವಸತಿ ಯೋಜನೆ, ವಾಜಪೇಯಿ ನಗರ ವಸತಿ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ (ಗ್ರಾ ಮತ್ತು ನ), ಪ್ರಧಾನಮಂತ್ರಿ ಆವಾಸ್ (ಗ್ರಾ) ಡಾ. ಡಿ. ದೇವರಾಜ ಅರಸು ವಸತಿ (ಗ್ರಾ ಮತ್ತು ನ) ಯೋಜನೆಗಳಡಿಯಲ್ಲಿ ವಿವಿಧ ಕಾರಣಗಳಿಂದಾಗಿ ಬ್ಲಾಕ್ ಆಗಿರುವ ಮನೆಗಳನ್ನು ಜಿಪಿಎಸ್ ಗೆ ಅಳವಡಿಸಿ ಪ್ರಗತಿಗೆ ಪರಿಗಣಿಸಿಕೊಳ್ಳಲು ಜನವರಿ 29, 2020 ರಂದು ನಡೆದ ಸಚಿವ ಸಂಪುಟದ ಉಪ ಸಮಿತಿಯ ಸಭೆಯಲ್ಲಿ ನಿರ್ಣಯಿಸಿದಂತೆ ಈಗಾಗಲೇ ಬ್ಲಾಕ್ ಮಾಡಲಾಗಿದ್ದ ಮನೆಗಳ ಬ್ಲಾಕ್‍ನ್ನು ತೆರವುಗೊಳಿಸಲಾಗಿದೆ. ಜಿಪಿಎಸ್ ಹಾಗೂ ವಿಜಿಲ್ ಆಪ್ ಮುಖಾಂತರ ವಿವರಗಳನ್ನು ಅಳವಡಿಸಲು ಫೆಬ್ರವರಿ 14, 2020 ರಿಂದ ಮಾರ್ಚ್ 31 ರ ವರೆಗೆ ಕಾಲಾವಕಾಶ ನೀಡಲಾಗಿದೆ. ತಮ್ಮ ಮತ ಕ್ಷೇತ್ರದ ಅರ್ಹ ಫಲಾನುಭವಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಪ್ರಗತಿಯಲ್ಲಿರುವ ಮನೆಗಳು 2012-13 ರಿಂದ 2019-20ನೇ ಶ್ರೇಣಿಯವರೆಗೆ ಪೂರ್ಣಗೊಂಡ ಮನೆಗಳು 6,194, ತಳಪಾಯ 785, ಗೋಡೆ 316, ಛಾವಣಿ 488, ಬ್ಲಾಕ್ ತೆರವುಗೊಳಿಸಿದ ಮನೆಗಳು 916, ಒಟ್ಟು 2505. ಪ್ರಗತಿಯಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಅನುದಾನ ರೂ. 21.42 ಕೋಟಿ, ಇಲ್ಲಿಯವರೆಗೆ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾದ ಅನುದಾನ ರೂ. 84.49 ಕೋಟಿ, ಪ್ರಸ್ತುತ ಅನುದಾನ ಬಿಡುಗಡೆಗೆ ಬಾಕಿಯಾದ ಒಟ್ಟು ಮನೆಗಳು 494, ಅನುದಾನ ರೂ. 1.78 ಕೋಟಿ ಆಗಿದೆ.

ಅಪೂರ್ಣಗೊಂಡ ಮನೆಗಳ ನಿರ್ಮಾಣ ಕಾಮಗಾರಿಗಳನ್ನು ಆಧ್ಯತೆಯ ಮೇಲೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಅನುದಾನ ಒದಗಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಜೊತೆಗೆ ಪ್ರಗತಿಯ ಹಂತದಲ್ಲಿರುವ ಈ ಮನೆಗಳಲ್ಲಿ ಒಂದೊಮ್ಮೆ ಅನರ್ಹರಿದ್ದಲ್ಲಿ ಅಥವಾ ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ಲೋಪ ದೋಷಗಳಿದ್ದಲ್ಲಿ ಅಂತಹ ಪ್ರಕರಣಗಳನ್ನು ಸರ್ಕಾರದ ಗಮನಕ್ಕೆ ತಂದರೆ ಅವುಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಅಲ್ಲದೆ ವಿವಿಧ ವಸತಿ ಯೋಜನೆಗಳಡಿ ಅನುದಾನ ದುರ್ಬಳಕೆಯನ್ನು ತಡೆಹಿಡಿಯುವ ಉದ್ದೇಶದಿಂದ ನವೆಂಬರ್ 16 ರ ಸರ್ಕಾರಿ ಆದೇಶದಲ್ಲಿ ಪ್ರಗತಿಯಲ್ಲಿರುವ ಹಾಗೂ ಅನುದಾನ ಬಿಡುಗಡೆಗೆ ಬೇಡಿಕೆ ಇರುವ ಮನೆಗಳನ್ನು ಜಿಪಿಎಸ್ ಆದಾರಿತ ವಿಜಿಲ್ ಹ್ಯಾಪ್ ಮೂಲಕ ಪರಿಶೀಲಿಸಲು ಗ್ರಾಮೀಣ ಪ್ರದೇಶದಲ್ಲಿ ಜಿ.ಪಂ.ಸಿಇಒ ಅವರ ಅಧ್ಯಕ್ಷತೆಯಲ್ಲಿ ಹಾಗೂ ನಗರ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಪರಿಶೀಲನೆ ಸಮಿತಿ ರಚಿಸಲಾಗಿದೆ. ವಸತಿ ವಿಜಿಲ್ ಆ್ಯಪ್ ಮುಖಾಂತರ ಜಿ.ಪಿ.ಎಸ್.ಗೆ ಅಳವಡಿಸಿ ಪರಿಶೀಲಿಸಿ ಅರ್ಹ ಎನಿಸಿದ 39,733 ಫಲಾನುಭವಿಗಳಿಗೆ ಈವರೆಗೆ ರೂ. 185.72 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಪ್ರತಿ ವಾರವು ಅನುದಾನ ಬಿಡುಗಡೆ ಮಾಡಲು ಕ್ರಮವಹಿಸಲಾಗುತ್ತಿದೆ. ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಇವರ ಮಟ್ಟದಲ್ಲಿ ಅನುಮೋದನೆಗೆ ಬಾಕಿ ಇರುವ ಫಲಾನುಭವಿಗಳಿಗೆ ಅನುಮೋದನೆ ನೀಡಿದ ತಕ್ಷಣವೇ ಅನುದಾನ ಬಿಡುಗಡೆ ಮಾಡಲಾಗುವುದು.

ಈ ಹಿನ್ನೆಲೆಯಲ್ಲಿ ಈಗಾಗಲೇ ಮಂಜೂರಾಗಿ ಫಲಾನುಭವಿಗಳ ಆಯ್ಕೆಯಾಗಿದ್ದು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುವ ಮನೆಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕಾದ ತುರ್ತು ಅನಿವಾರ್ಯತೆ ಇರುವುದರಿಂದ ಹಾಗೂ ಈ ಪ್ರಕ್ರಿಯೆಯು ಮುಗಿದ ನಂತರವೇ ವಿಧಾನಸಭಾ ಕ್ಷೇತ್ರವಾರು ಹೊಸ ಮನೆಗಳ ಗುರಿಯನ್ನು ನೀಡಲು ತಿರ್ಮಾನಿಸಿರುವುದರಿಂದ ತಮ್ಮ ಕ್ಷೇತ್ರಗಳಲ್ಲಿ ಪ್ರಸ್ತುತ ಪ್ರಗತಿಯಲ್ಲಿರುವ ಮನೆಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ಹಾಗೂ ಸರ್ಕಾರದ ಸಹಾಯಧನ ಅರ್ಹ ಫಲಾನುಭವಿಗಳಿಗೆ ದೊರೆಯುವಂತಾಗಬೇಕು ಎಂದು ವಸತಿ ಹಾಗೂ ಉಸ್ತುವಾರಿ ಸಚಿವ ವಿ. ಸೋಮಣ್ಣ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮಾಹಿತಿ ನೀಡಿದ್ದಾರೆ.