ಮಡಿಕೇರಿ, ಮಾ. 23: ಕೊರೊನಾ ರೋಗಾಣು ಹರಡುವಿಕೆಯ ಗಾಂಭೀರ್ಯ ಜನತೆಗೆ ಇನ್ನೂ ಅರಿವಾದಂತಿಲ್ಲ. ಇದು ಲಘುವಾಗಿ ಪರಿಗಣಿಸುವ ವಿಚಾರವಲ್ಲ. ಜನರ ನಿರ್ಲಕ್ಷ್ಯ ಗಮನಿಸಿದ ವೈದ್ಯರೊಬ್ಬರು ‘‘ಬೆಂಕಿಯ ಬಳಿ ಸಾಗಿ ತುಪತುಪನೆ ಸಾಯುವ ಕ್ರಿಮಿಗಳಂತೆ ಸಾಯುತ್ತೀರ ಎಚ್ಚರ’’ ಎಂದು ಆಡಿದ ಕಟುಮಾತಿನ ವಾಟ್ಸಾಪ್ ಸಂದೇಶ ಎಲ್ಲರನ್ನೂ ಎಚ್ಚರಿಸುತ್ತಿದೆ.ಈ ವೈರಾಣು ಪರಸ್ಪರ ಸ್ಪರ್ಶದಿಂದ, ಕೆಮ್ಮು, ಸೀನು, ಉಗುಳಿನಿಂದ ಹರಡುತ್ತದೆ ಎಂದು ಹೇಳಿದ್ದ ವಿಶ್ವ ಆರೋಗ್ಯ ಸಂಸ್ಥೆ, ಇಂದು ಹೊಸ ಬಾಂಬ್ ಸಿಡಿಸಿದೆ. ರೋಗಾಣು ವಾಯುವಿನಿಂದಲೂ ಹರಡುತ್ತದೆ ಎಂದಿದೆ. ಇಲ್ಲಿಯ ತನಕ ರೋಗ ರುಜುವಾತಾದವರು, ಶುಶ್ರೂಷೆ ಮಾಡುವವರು ಮಾತ್ರ ‘ಮಾಸ್ಕ್’ ಧರಿಸಿದರೆ ಸಾಕು ಎನ್ನುತ್ತಿದ್ದವರು, ಇದೀಗ ಹೊರಗೆ ಓಡಾಡುವ ಎಲ್ಲರೂ ಧರಿಸಬೇಕು ಎಂದು ಹೇಳಿದ್ದಾರೆ.

ಒಬ್ಬ ವ್ಯಕ್ತಿಗೆ ರೋಗಾಣು ತಗಲಿದರೆ ಅದರ ಪರಿಣಾಮದ ಅರಿವಾಗುವುದು, ಪರೀಕ್ಷೆಗೆ ಲಭ್ಯವಾಗುವುದು ಹತ್ತು ದಿನದ ಬಳಿಕ. ಈ ಹತ್ತು ದಿನದಲ್ಲಿ ಅವನಿಂದ ವೈರಾಣು ಕನಿಷ್ಟ 250-300 ಮಂದಿಗೆ ಹರಡುತ್ತದೆ. ಹೀಗೆ ಈ ಮಂದಿ ಮತ್ತಷ್ಟು ಸಾವಿರ ಮಂದಿಗೆ ಸೋಂಕು ತಗಲಿಸುತ್ತಾರೆ. ಈ ವ್ಯಾಪಕ ಹರಡುವಿಕೆಯ ತಡೆಗೆ ನಾವು ಕಡ್ಡಾಯವಾಗಿ ಮನೆಗಳೊಳಗೆ ತಂಗುವುದು ಸೂಕ್ತ ಹಾಗೂ ಅಗತ್ಯ.

ಆಗಿಂದಾಗ್ಗೆ ಕೈ ತೊಳೆಯುವುದು ಹೊರಗೆ ಹೋಗಿ ಬಂದಲ್ಲಿ ಬಟ್ಟೆ ಬದಲಿಸಿ ಒಳ ಬರುವುದು, ಚೈತನ್ಯ ತುಂಬುವ ಆಹಾರ - ಪಾನೀಯ ಸೇವಿಸುವುದು ಹಿತಕಾರಿ.

ಎಚ್ಚರಗೊಳ್ಳಿ. ಒಮ್ಮೆಗೆ ನೂರಾರು ಮಂದಿ ಹಾಸಿಗೆ ಹಿಡಿದರೆ, ಮಲಗಲು ಆಸ್ಪತ್ರೆಗಳಿಲ್ಲ... ಪರಿಶೀಲಿಸಲು ಶೀಘ್ರ ವ್ಯವಸ್ಥೆಗಳಿಲ್ಲ, ಸಾಕಷ್ಟು ಆಮ್ಲಜನಕ ಒದಗಿಸಲು ಸಲಕರಣೆಗಳಿಲ್ಲ. ನಿಮಗಾಗಿ - ನಿಮ್ಮ ಸುತ್ತ ಇರುವವರ ಹಿತಕ್ಕಾಗಿ ಶಿಸ್ತು ಅಳವಡಿಸಿಕೊಳ್ಳಿ.

-ಅನಂತ್.