ಸೋಮವಾರಪೇಟೆ,ಮಾ.23: ಮಾರಕ ಕೊರೊನಾ ವಿರುದ್ಧ ಹೋರಾಡಲು ಸರ್ಕಾರ ವಿವಿಧ ಆದೇಶಗಳನ್ನು ಜಾರಿಗೆ ತರುತ್ತಿದ್ದು, ಇದರ ಮುಂದುವರೆದ ಭಾಗವಾಗಿ ಆದೇಶಿಸಲ್ಪಟ್ಟಿರುವ ಲಾಕ್‍ಡೌನ್‍ಗೆ ಸೋಮವಾರಪೇಟೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.ಭಾನುವಾರ ಜನತಾ ಕಫ್ರ್ಯೂ ಇದ್ದ ಹಿನ್ನೆಲೆ ಮನೆಯೊಳಗೆ ಇದ್ದ ಮಂದಿ ಇಂದು ಬೆಳಗ್ಗೆಯೇ ಪಟ್ಟಣಕ್ಕೆ ಆಗಮಿಸಿ ಅಗತ್ಯ ವಸ್ತುಗಳನ್ನು ಖರೀದಿಸುವಲ್ಲಿ ತೊಡಗಿಕೊಂಡಿದ್ದರು. ಈ ಮಧ್ಯೆ ಜಿಲ್ಲಾಡಳಿತದಿಂದ ಬಂದಿರುವ ಲಾಕ್‍ಡೌನ್ ಆದೇಶದ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಅನೇಕ ಅಂಗಡಿ, ಬೇಕರಿಗಳು, ಕ್ಯಾಂಟೀನ್, ಹಾರ್ಡ್‍ವೇರ್ ಸೇರಿದಂತೆ ಇನ್ನಿತರ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ಶೇ. 20ರಷ್ಟು ಅಂಗಡಿಗಳು ಮಾತ್ರ ಬೆಳಗ್ಗೆನಿಂದಲೇ ಬಂದ್ ಆಗಿದ್ದವು.ಸಂತೆ ದಿನವಾಗಿದ್ದರಿಂದ ಸೋಮವಾರಪೇಟೆ ಪಟ್ಟಣಕ್ಕೆ ಸುತ್ತಮುತ್ತಲ ಗ್ರಾಮಸ್ಥರು ಮತ್ತು ಗ್ರಾಮೀಣ ಭಾಗದಿಂದ ಸಾರ್ವಜನಿಕರು ಆಗಮಿಸಿ ದಿನೋಪಯೋಗಿ ವಸ್ತುಗಳನ್ನು ಖರೀದಿಸಿದರು. ಸರ್ಕಾರದ ಆದೇಶದ ಹಿನ್ನೆಲೆ ಸಂತೆ ರದ್ದುಗೊಂಡಿರುವ ದರಿಂದ ಸ್ಥಳೀಯ ವರ್ತಕರು ಮುಚ್ಚಲ್ಪಟ್ಟಿರುವ ಹೊಟೇಲ್, ಅಂಗಡಿಗಳ ಎದುರು ತರಕಾರಿಗಳನ್ನು ಮಾರಾಟ ಮಾಡಿದರು.ಈ ಸಂದರ್ಭ ಜನರ ನೂಕುನುಗ್ಗಲು ಉಂಟಾಯಿತು. ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರು ಪಟ್ಟಣದಾದ್ಯಂತ ಜೀಪ್‍ನಲ್ಲಿ ಸಂಚರಿಸಿ, ಬೆಳಗ್ಗೆಯಿಂದಲೇ ತೆರೆಯಲ್ಪಟ್ಟಿದ್ದ ಬೇಕರಿ, ಹಾರ್ಡ್‍ವೇರ್ ಅಂಗಡಿ, ಮೊಬೈಲ್, ಬಟ್ಟೆ ಮಾರಾಟ ಮಳಿಗೆ, ಪ್ರಿಂಟಿಂಗ್ ಪ್ರೆಸ್, ಗೂಡಂಗಡಿ,
(ಮೊದಲ ಪುಟದಿಂದ) ಕ್ಯಾಂಟೀನ್, ಸ್ಟುಡಿಯೋ ಸೇರಿದಂತೆ ತೀರಾ ಅನಿವಾರ್ಯವಲ್ಲದ ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.
ತರಕಾರಿಗೆ ಬೆಲೆ ದಿಢೀರ್ ಏರಿಕೆ: ಸಂತೆ ರದ್ದುಗೊಂಡಿದ್ದರಿಂದ ದೂರದ ಊರುಗಳಿಂದ ಆಗಮಿಸಿದ್ದ ಮಂದಿ ಹೆಚ್ಚಿನ ಹಣ ನೀಡಿ ತರಕಾರಿ ಅಂಗಡಿಗಳಲ್ಲಿ ತರಕಾರಿಗಳನ್ನು ಖರೀದಿಸುವಂತಾಯಿತು. ಕೊರೊನಾ-ಲಾಕ್‍ಡೌನ್ ಸನ್ನಿವೇಶವನ್ನೇ ಬಂಡವಾಳ ಮಾಡಿಕೊಂಡ ಕೆಲ ತರಕಾರಿ ಅಂಗಡಿಗಳ ಮಾಲೀಕರು ದುಪ್ಪಟ್ಟು ಬೆಲೆಗೆ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು.
ಇದರಿಂದ ಕೆರಳಿದ ಗ್ರಾಹಕರು, ಪರಿಸ್ಥಿತಿಯ ಲಾಭವನ್ನು ಪಡೆಯಲು ಮುಂದಾದ ತರಕಾರಿ ಅಂಗಡಿಗಳ ವಿರುದ್ಧ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದರು. ಸ್ಥಳಕ್ಕಾಗಮಿಸಿದ ಪ.ಪಂ. ಆರೋಗ್ಯ ನಿರೀಕ್ಷಕ ಉದಯಕುಮಾರ್ ಮತ್ತು ಸಿಬ್ಬಂದಿಗಳು, ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಇದರೊಂದಿಗೆ ಪ್ರತಿ ತರಕಾರಿಯ ಬೆಲೆಯನ್ನು ಫಲಕಗಳಲ್ಲಿ ಬರೆದು ಸಾರ್ವಜನಿಕವಾಗಿ ಪ್ರಕಟಿಸುವಂತೆ ಸೂಚನೆ ನೀಡಿದರು.
ಇಂದು ಬೆಳಗ್ಗಿನಿಂದಲೇ ಪಟ್ಟಣದಲ್ಲಿ ಜನಸಂಚಾರ ಅಧಿಕವಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ಪಟ್ಟಣಕ್ಕೆ ಆಗಮಿಸಿದ ಮಂದಿ ದಿನಸಿ ಅಂಗಡಿಗಳ ಎದುರು ಗುಂಪುಗೂಡಿ ಖರೀದಿಯಲ್ಲಿ ತೊಡಗಿದ್ದರು. ಈ ಸಂದರ್ಭ ಪೊಲೀಸರು ಆಗಮಿಸಿ ಗುಂಪುಗೂಡದಂತೆ ಸೂಚನೆ ನೀಡಿದರು.
ಸರ್ಕಾರಿ ಮತ್ತು ಖಾಸಗಿ ಬಸ್‍ಗಳು ಇಲ್ಲದ್ದರಿಂದ ಬಹುತೇಕ ಮಂದಿ ಆಟೋಗಳ ಮೊರೆ ಹೋಗಬೇಕಾಯಿತು. ಇನ್ನು ಬಸ್‍ಗಳ ಸಂಚಾರ ಸ್ಥಗಿತವಾಗಿದ್ದ ಹಿನ್ನೆಲೆ ಪಟ್ಟಣದಿಂದ ಹೊರಭಾಗಕ್ಕೆ ಸರ್ಕಾರಿ, ಖಾಸಗಿ ಕೆಲಸಕ್ಕೆ ತೆರಳುವ ಮಂದಿ ಪಟ್ಟಣದಲ್ಲಿಯೇ ಉಳಿಯುವಂತಾಯಿತು.
ಬ್ಯಾಂಕ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಎಟಿಎಂಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಹಣ ದೊರಕದೇ ಗ್ರಾಹಕರು ಪರದಾಡಿದರು. ಸರ್ಕಾರಿ ಕಚೇರಿಗಳಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ನಡೆಯದ ಕಾರಣ, ಬಹುತೇಕ ಮಂದಿ ಕಚೇರಿಗೆ ಆಗಮಿಸಿ ವಾಪಸ್ ಹೋಗುವಂತಾಯಿತು.
ಉಳಿದಂತೆ ಮೆಡಿಕಲ್ ಅಂಗಡಿಗಳು, ದಿನಸಿ, ತರಕಾರಿ ಅಂಗಡಿಗಳು ಎಂದಿನಂತೆ ತೆರೆದಿದ್ದು, ವ್ಯಾಪಾರ ವಹಿವಾಟು ಜೋರಾಗಿತ್ತು. ಯುಗಾದಿ ಹಬ್ಬದ ಹಿನ್ನೆಲೆ ಬಟ್ಟೆ ಅಂಗಡಿಗಳ ಮಾಲೀಕರು ಭಾರೀ ಪ್ರಮಾಣದ ಬಟ್ಟೆಗಳನ್ನು ವ್ಯಾಪಾರಕ್ಕೆಂದು ತಂದಿದ್ದರೂ ಲಾಕ್‍ಡೌನ್ ಹಿನ್ನೆಲೆ ವ್ಯಾಪಾರಕ್ಕೆ ಅವಕಾಶ ಲಭ್ಯವಾಗಲಿಲ್ಲ.
ಯುಗಾದಿಯ ಹಿನ್ನೆಲೆ ಬೇವು ಬೆಲ್ಲದ ಮಾರಾಟ ಜೋರಾಗಿ ನಡೆಯಿತು. ಸಾರ್ವಜನಿಕರು ಬೇವಿನ ಒಂದು ಕಟ್ಟಿಗೆ 20 ರೂಪಾಯಿ ನೀಡಿ ಖರೀದಿಸಿದರು. ಒಟ್ಟಾರೆ ಪ್ರಥಮ ದಿನದ ‘ಲಾಕ್‍ಡೌನ್’ಗೆ ಸೋಮವಾರಪೇಟೆ ಪಟ್ಟಣದಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿತು.
ಗಡಿ ಭಾಗದಲ್ಲಿ ತಪಾಸಣೆ
ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೊಡಗಿನಲ್ಲಿ ಲಾಕ್‍ಡೌನ್ ಘೋಷಣೆಯಾಗಿರುವದರಿಂದ ಜಿಲ್ಲೆಯ ಗಡಿ ಭಾಗಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ಹಾಸನ ಜಿಲ್ಲೆಯ ಗಡಿಯನ್ನು ಹೊಂದಿಕೊಂಡಿರುವ ಸೋಮವಾರಪೇಟೆ ತಾಲೂಕಿನ ಗಡಿಗಳಲ್ಲಿ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದು, ತಾಲೂಕಿನ ಬಾಣಾವರ ಗೇಟ್‍ನಲ್ಲಿ ಎಎಸ್‍ಐ ಮತ್ತು ಪೊಲೀಸ್ ಪೇದೆ ಕರ್ತವ್ಯದಲ್ಲಿದ್ದಾರೆ.
ಹಾಸನದ ಕೊಣನೂರು ಮಾರ್ಗದಿಂದ ಬಾಣಾವರ ಮೂಲಕ ಕೊಡಗಿಗೆ ಆಗಮಿಸುವ ಪ್ರತಿಯೊಂದು ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದು, ವಾಹನ ಸೇರಿದಂತೆ ಪ್ರಯಾಣಿಕರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.
ಅನಗತ್ಯವಾಗಿ ಸಂಚರಿಸದಂತೆ ಎಚ್ಚರಿಕೆ ನೀಡುತ್ತಿರುವ ಪೊಲೀಸರು, ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದರು.
ಇದರೊಂದಿಗೆ ಕೊಡ್ಲಿಪೇಟೆ ವ್ಯಾಪ್ತಿಯ ನಿಲುವಾಗಿಲು, ಹಿಪ್ಲಿಗೇಟ್, ಚಂಗಡಹಳ್ಳಿ ರಸ್ತೆ, ಶಾಂತಪುರಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿದ್ದು, ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ ಎಂದು ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಕೃಷ್ಣನಾಯಕ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಫೀಲ್ಡ್‍ಗಿಳಿದ ತಹಶೀಲ್ದಾರ್: ಮಾ.23 ಹಾಗೂ 30ರ ಸಂತೆಯನ್ನು ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದರೂ, ಸೋಮವಾರ ಬೆಳಿಗ್ಗೆ ಖಾಸಗಿ ಬಸ್ ನಿಲ್ದಾಣದಲ್ಲಿ ಸಂತೆ ಪ್ರಾರಂಭವಾಗಿತ್ತು. ತರಕಾರಿ, ದಿನಸಿಗಳ ವ್ಯಾಪಾರ ಸಾಗಿತ್ತು. ಜನಸಂದಣಿಯೂ ಜಾಸ್ತಿಯಾಗಿತ್ತು.
ಮಧ್ಯಾಹ್ನದ ವೇಳೆಗೆ ಕಾರ್ಯಪ್ರವೃತ್ತರಾದ ತಹಶೀಲ್ದಾರ್ ಗೋವಿಂದರಾಜು, ಪಪಂ ಮುಖ್ಯಾಧಿಕಾರಿ ರಮೇಶ್ ಅವರುಗಳು ಫೀಲ್ಡ್‍ಗಿಳಿದು ಪೊಲೀಸರ ಸಹಕಾರದೊಂದಿಗೆ ವ್ಯಾಪಾರದಲ್ಲಿ ತೊಡಗಿದ್ದವರನ್ನು ಖಾಲಿ ಮಾಡಿಸಲು ಹರಸಾಹಸಪಟ್ಟರು.
ನಂತರ ಧ್ವನಿವರ್ಧಕದ ಮೂಲಕ ಪ್ರತಿ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಲಾಯಿತು. ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಯಿತು. ನಂತರ ಜನಸಂಖ್ಯೆಯೂ ವಿರಳವಾಯಿತು.
ತರಕಾರಿಯನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಸೂಕ್ತ ಕ್ರಮಕೈಗೊಳ್ಳಲಾಗುವದು. ನಿಯಮ ಮೀರಿ ಅಂಗಡಿಗಳನ್ನು ತೆರೆದು ಜನ ಸೇರುವಂತೆ ಮಾಡಿದರೆ, ಅಲ್ಲದೆ ದಿನಸಿಗೆ ಅಧಿಕ ಬೆಲೆಯನ್ನು ಪಡೆದರೆ ಅಂತಹ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗುವದು, ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವದು ಎಂದು ತಹಶೀಲ್ದಾರ್ ಗೋವಿಂದರಾಜು ಎಚ್ಚರಿಸಿದರು.
ಕೂಡಿಗೆ ವ್ಯಾಪ್ತಿಯಲ್ಲಿ ಬಂದ್
ಕೂಡಿಗೆಯ ಕಲವು ಅಂಗಡಿಗಳು ಮುಚ್ಚಲ್ಪಟ್ಟಿದವು. ಯಾವುದೇ ವಾಹನ ಸಂಚಾರ ಇಲ್ಲದ ಕಾರಣ ಸಾರ್ವಜನಿಕರ ತಿರುಗಾಟ ಬಹಳ ಕಡಿಮೆ ಇತ್ತು.
ಈ ವ್ಯಾಪ್ತಿಯ ಬ್ಯಾಂಕ್ ಸಹಕಾರ ಸಂಘಗಳ ವ್ಯವಹಾರ ಕೆಲ ದಿನಸಿ ಅಂಗಡಿಗಳಲ್ಲಿ ವ್ಯಾಪಾರ ಬರದಿಂದ ನಡೆಯುತಿತ್ತು.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿರುವ 50ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿರುತ್ತಾರೆ. ಈ ವ್ಯಾಪ್ತಿಯ ಸಣ್ಣ ಮತ್ತು ದೊಡ್ಡ ಕೈಗಾರಿಕಾ ಘಟಕಗಳಲ್ಲಿ ಬೆಳಿಗ್ಗೆ ಕೆಲಸ ಪ್ರಾರಂಭವಾದರು ನಂತರ ಆಯಾ ಕಂಪನಿಯರು ಬಂದ್ ಮಾಡುವಲ್ಲಿ ಮುಂದಾದರು.
ಶಿರಂಗಾಲ ಗೇಟ್ ಬಂದ್
ಕೊಡಗಿನ ಗಡಿ ಭಾಗ ಶಿರಂಗಾಲದಲ್ಲಿರುವ ಅರಣ್ಯಇಲಾಖೆಯ. ತಪಾಸಣಾ ಕೇಂದ್ರದಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆಯವರು ಸಂಪೂರ್ಣ ಬಂದ್ ಮಾಡಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಸನ ಕುಶಾಲನಗರ ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ಹಾಸನ ಕಡೆಯಿಂದ ಬರುವ, ಕೊಡಗು ಜಿಲ್ಲೆಯಿಂದ ಹೋಗುವ ವಾಹನಗಳ ತಪಾಸಣೆ ಮತ್ತು ಬೇರೆ ವಾಹನಗಳು ಜಿಲ್ಲೆಗೆ ಶಿರಂಗಾಲದ ಮೂಲಕ ಬರುವವರನ್ನು ತಡೆಹಿಡಿಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಸೇರಿದಂತೆ ಸರ್ವ ಸದಸ್ಯರು ಗ್ರಾಮದ ಎಲ್ಲಾ ವಾರ್ಡ್‍ಗಳಿಗೆ ಭೇಟಿ ನೀಡಿ ಶುಚಿತ್ವದ ಅರಿವು ಮೂಡಿಸಲು ಅನೇಕ ರೀತಿಯ ತಿಳುವಳಿಕೆ ಔಷಧಿ ಸಿಂಪಡಿಸುವ. ಕಾರ್ಯ ಚರಂಡಿಗಳ ಡಿಡಿಟಿ ಪೌಡರ್ ಹಾಕುವಿಕೆ ನಡೆಯುತ್ತಿದೆ.
ಶನಿವಾರಸಂತೆಯಲ್ಲಿ ರೈತರ ಸಹಕಾರ
ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆ ಶನಿವಾರಸಂತೆ ಸಮೀಪದ ಆಲೂರು ಸಿದ್ದಾಪುರ ಗ್ರಾಮದಲ್ಲಿ ಹೊಟೇಲ್, ಅಂಗಡಿ ಮುಂಗಟ್ಟುಗಳು, ತರಕಾರಿ ಅಂಗಡಿಗಳು ಮುಚ್ಚಿದ್ದು, ರಸ್ತೆಯಲ್ಲಿ ಜನಜಂಗುಳಿ ಇಲ್ಲದೇ ಬಿಕೋ ಎನ್ನುತ್ತಿದ್ದವು. ಸರಕಾರಿ, ಖಾಸಗಿ ಬಸ್‍ಗಳ ಸಂಚಾರವೂ ಸ್ಥಗಿತಗೊಂಡಿದ್ದವು. ಹಳ್ಳಿಯಾಗಿದ್ದರೂ ರೈತರ ಕೃಷಿ ಚಟುವಟಿಕೆಗಳಾಗಲೀ, ಟ್ರ್ಯಾಕ್ಟರ್‍ನ ಓಡಾಟವಾಗಲಿ ಕಂಡುಬರಲಿಲ್ಲ.
ಹೊರಗಡೆಯಿಂದ ಬರುತ್ತಿದ್ದ ರೈತರ ಸುಳಿವೂ ಇರಲಿಲ್ಲ. ಗ್ರಾಮದಲ್ಲಿ ಹಾಲು ಉತ್ಪನ್ನ ಸಹಕಾರ ಸಂಘಕ್ಕೆ ಹಾಲು ಹಾಕುತ್ತಿದ್ದ ಸುತ್ತಮುತ್ತಲಿನ ರೈತರು ಸಹ ಕಫ್ರ್ಯೂ ಹಿನ್ನೆಲೆ ಹಾಲು ಹಾಕದೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಸಂಘದ ಮುಂದೆ ಖಾಲಿ ಹಾಲು ಕ್ಯಾನ್‍ಗಳು ಮುಷ್ಕರ ಹೂಡಿದಂತೆ ಕಾಣಿಸಿದವು. ಗ್ರಾಮದ ಪ್ರಾಥಮಿಕ ಆರೋಗ್ಯ ಆರೋಗ್ಯ ಕೇಂದ್ರದಲ್ಲಿ ಮಾತ್ರ ವೈದ್ಯರು, ಸಿಬ್ಬಂದಿ ಎಂದಿನಂತೆ ಕರ್ತವ್ಯ ನಿರ್ವಹಿಸಿದರು.
ಕೊಪ್ಪ ಗೇಟ್‍ನಲ್ಲಿ ಒತ್ತಡ
ಕುಶಾಲನಗರ: ಜನತಾ ಕಫ್ರ್ಯೂ ಅಂತ್ಯಗೊಂಡ ಬೆನ್ನಲ್ಲೇ ಕೊಡಗು ಜಿಲ್ಲೆಗೆ ವಾಹನಗಳ ಮಹಾಪೂರವೇ ಹರಿದುಬಂದ ಹಿನ್ನಲೆಯಲ್ಲಿ ಕುಶಾಲನಗರ ಗಡಿಭಾಗದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಏರುಪೇರು ಉಂಟಾದ ಘಟನೆ ನಡೆಯಿತು. ಬೆಳಿಗ್ಗೆ 5 ಗಂಟೆಯಿಂದಲೇ ಹೆದ್ದಾರಿ ರಸ್ತೆಯಲ್ಲಿ ಬೆಂಗಳೂರು ಮೈಸೂರು ಭಾಗದಿಂದ ಖಾಸಗಿ ವಾಹನಗಳು, ಸರಕು ತುಂಬಿದ ವಾಹನಗಳು ಕೊಪ್ಪ ಗೇಟ್‍ನಿಂದ ಮೈಸೂರು ರಸ್ತೆಯಲ್ಲಿ ಸುಮಾರು 2ಕಿಮೀ ಉದ್ದಕ್ಕೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಗೋಚರಿಸಿತು. ಮಾಹಿತಿ ಅರಿತ ಪೊಲೀಸರು ಕುಶಾಲನಗರ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕೊಪ್ಪ ಕಾವೇರಿ ಸೇತುವೆ ಬಳಿ ಗೇಟ್ ಬಂದ್ ಮಾಡಿ ವಾಹನಗಳನ್ನು ತಡೆಗಟ್ಟಿ ತಪಾಸಣೆಗೆ ಒಳಪಡಿಸಿ ಬಿಡಲು ಕ್ರಮಕೈಗೊಂಡಿದ್ದು ಕಂಡುಬಂತು.
ಇನ್ನೊಂದೆಡೆ ಮಡಿಕೇರಿ ಕಡೆಯಿಂದಲೂ ನೂರಾರು ವಾಹನಗಳು ಮೈಸೂರು ಕಡೆಗೆ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಕುಶಾಲನಗರ, ಬೈಲುಕೊಪ್ಪ ಪೊಲೀಸರು ಮತ್ತು ಹಲವು ಇಲಾಖೆಗಳ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳದಲ್ಲೇ ಇದ್ದು ಜಿಲ್ಲಾಧಿಕಾರಿಗಳ ಸೂಚನೆಯಂತೆ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಸಹಕರಿಸಿದರು.
ಕೆಲವು ಜನರು ಅನವಶ್ಯಕ ಕುಶಾಲನಗರದಿಂದ ಕೊಪ್ಪ ಕಡೆ ಕೊಪ್ಪದಿಂದ ಕುಶಾಲನಗರ ಕಡೆಗೆ ಓಡಾಡುತ್ತಿದ್ದ ಬಗ್ಗೆ ಮಾಹಿತಿ ಅರಿತ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸುವ ಸಂದರ್ಭ ಮಾತಿನ ಚಕಮಕಿ ನಡೆದು ಲಾಠಿಯ ರುಚಿ ನೋಡುವಂತಾಯಿತು.
ಈ ನಡುವೆ ಜಿಲ್ಲೆಗೆ ಯಾವುದೇ ವಾಹನಗಳನ್ನು ಸಂಚರಿಸಲು ಅವಕಾಶ ಕಲ್ಪಿಸದೆ ಮರಳಿ ಮೈಸೂರು ಕಡೆಗೆ ನೂರಾರು ವಾಹನಗಳನ್ನು ಕಳುಹಿಸುವ ವ್ಯವಸ್ಥೆ ಕೂಡ ಮಾಡಲಾಯಿತು. ಪರೀಕ್ಷೆ ಮುಗಿದು ತವರಿಗೆ ಬಂದ ವಿದ್ಯಾರ್ಥಿಗಳು, ಪೋಷಕರು ಈ ವ್ಯವಸ್ಥೆಯಿಂದ ಕಂಗೆಟ್ಟು ದಿಕ್ಕು ತೋಚದೆ ಗಂಟೆಗಟ್ಟಲೆ ದಾರಿಯಲ್ಲೇ ಕಾಯಬೇಕಾದ ಪರಿಸ್ಥಿತಿ ಉಂಟಾಯಿತು. ಕೊಪ್ಪ ಗೇಟ್ ಬಳಿ ಆಗಮಿಸಿದ ಪೊಲೀಸ್ ಉಪಅಧೀಕ್ಷಕ ಶೈಲೇಂದ್ರ ಅವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಮಹೇಶ್ ಮತ್ತು ಸಿಬ್ಬಂದಿಗಳು ಪ್ರಯಾಣಿಕರ ಮಾಹಿತಿ ಪಡೆದು ಜಿಲ್ಲೆಗೆ ವಾಹನ ಬಿಡಲು ಕ್ರಮಕೈಗೊಂಡರು. ಆಂಬ್ಯುಲೆನ್ಸ್, ತುರ್ತು ಅಗತ್ಯ ಸರಕು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಇನ್ನೊಂದೆಡೆ ಬೈಲುಕೊಪ್ಪ ಪೊಲೀಸ್ ಠಾಣಾಧಿಕಾರಿ ಸವಿ ಅವರು ಮತ್ತು ಸಿಬ್ಬಂದಿಗಳು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಕೆಲವು ಸ್ಥಳೀಯರು ಸೇರಿ ಕೊಪ್ಪ ಕಾವೇರಿ ಪ್ರತಿಮೆ ಬಳಿ ಮತ್ತು ಬೆಟ್ಟದಪುರ ಸರ್ಕಲ್ ಬಳಿ ವಾಹನಗಳನ್ನು ತಡೆಯೊಡ್ಡಿ ಕೆಲವು ವಾಹನಗಳಿಗೆ ಬದಲೀ ರಸ್ತೆಯಲ್ಲಿ ತೆರಳುವಂತೆ ಸೂಚನೆ ಮಾಡಲಾಯಿತು. ಮಧ್ಯಾಹ್ನ 3 ಗಂಟೆಗೆ ಬಹುತೇಕ ವಾಹನಗಳ ಸಂಚಾರ ಸುಗಮವಾಗುವಂತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾದರು.
ಕುಶಾಲನಗರ ಪಟ್ಟಣದ ಅಂಗಡಿ ಮುಂಗಟ್ಟುಗಳು ತಮ್ಮ ವ್ಯಾಪಾರ ವಹಿವಾಟನ್ನು ರದ್ದುಗೊಳಿಸಿದ್ದರು. ಅಗತ್ಯ ವಸ್ತುಗಳಾದ ಔಷಧಿ, ದಿನಸಿ, ತರಕಾರಿ ಅಂಗಡಿಗಳು ತೆರೆದಿದ್ದು ಜನಸಂದಣಿ ವಿರಳವಾಗಿತ್ತು. sಸರಕಾರಿ ಮತ್ತು ಖಾಸಗಿ ಬಸ್‍ಗಳು ಸಂಚಾರ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನತೆಗೆ ಅನಾನುಕೂಲ ಉಂಟಾಗಿತ್ತು. ಕುಶಾಲನಗರ ಸರಕಾರಿ ಬಸ್ ನಿಲ್ದಾಣದ ಪ್ರಯಾಣಿಕರಲ್ಲದೆ ಬಿಕೋ ಎನ್ನುತ್ತಿತ್ತು. ಪಟ್ಟಣದ ರಸ್ತೆಗಳಲ್ಲಿ ಸ್ಥಳೀಯ ವಾಹನಗಳ ಸಂಚಾರ ವಿರಳವಾಗಿತ್ತು. ದೇವಾಲಯ, ಚರ್ಚ್‍ಗಳಲ್ಲಿ ಯಾವುದೇ ಪೂಜಾ ವಿಧಿವಿಧಾನಗಳು ನಡೆಯದೆ ಭಕ್ತರಿಗೆ ಕಳೆದ ಎರಡು ದಿನಗಳಿಂದ ನಿರ್ಬಂಧ ಹೇರಲಾಗಿತ್ತು. ಮಸೀದಿಗಳಿಗೆ ಸಾಮೂಹಿಕವಾಗಿ ತೆರಳದಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ ಮೇರೆಗೆ ನಿತ್ಯ ನಮಾಜ್‍ಗೆ ತೆರಳುವವರ ಸಂಖ್ಯೆ ಕೂಡ ಕಡಿಮೆ ಕಂಡುಬಂತು. ಸಮೀಪದ ಕೊಪ್ಪ ವ್ಯಾಪ್ತಿಯಲ್ಲಿ ಪಂಚಾಯ್ತಿ ಮೂಲಕ ಮೈಕ್‍ನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ರಸ್ತೆಗೆ ಯಾರೂ ಬರದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿರುವ ಬಗ್ಗೆ ಮಾಹಿತಿ ನೀಡಲಾಯಿತು. ಪೊಲೀಸರು ಮತ್ತು ಗ್ರಾಪಂ ಅಧಿಕಾರಿ ಸಿಬ್ಬಂದಿಗಳು ಪ್ರತಿ ಅಂಗಡಿಗಳಿಗೆ ತೆರಳಿ ಮುಚ್ಚಲು ಸೂಚನೆ ನೀಡುತ್ತಿದ್ದ ದೃಶ್ಯ ಕಂಡುಬಂತು.
ಸಂಜೆ ಆರು ಗಂಟೆಯಿಂದ ಕುಶಾಲನಗರ- ಮೈಸೂರು ಗಡಿಯನ್ನು ಪೊಲೀಸರು ಬಂದ್ ಮಾಡಿದ ಹಿನ್ನೆಲೆಯಲ್ಲಿ ನೂರಾರು ವಾಹನಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ಉಂಟಾಯಿತು.
ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಂದ್ ಮಾಡಿದ ಪೊಲೀಸರು ಎರಡೂ ಕಡೆ ಸಂಚಾರ ಸ್ಥಗಿತ ಗೊಳಿಸಿದರು.
ಪೊಲೀಸ್ ವರಿಷ್ಟಾಧಿಕಾರಿಗಳ ಸೂಚನೆಯಂತೆ ಬಂದ್ ಮಾಡಲಾಗಿದೆ ಎಂದು ಡಿವೈಎಸ್ಪಿ ಶೈಲೇಂದ್ರ ‘ಶಕ್ತಿ’ಗೆ ತಿಳಿಸಿದ್ದಾರೆ.
ಮೈಸೂರು, ಹುಣಸೂರು, ಪಿರಿಯಾಪಟ್ಟಣದ ನೂರಾರು ನೌಕರರು, ಕಾರ್ಮಿಕರು ಸೇರಿದಂತೆ ಕುಶಾಲನಗರದಿಂದ ಕೊಪ್ಪ ಕಡೆಯ ಪ್ರಯಾಣಿಕರು ತಮ್ಮ ವಾಹನದಲ್ಲಿ ಉಳಿದು ಪರದಾಡುವ ಸ್ಥಿತಿ ಕಂಡುಬಂತು.
ಈ ಸಂದರ್ಭ ಮಾತನಾಡಿದ ತಹಶೀಲ್ದಾರ್ ಗೋವಿಂದರಾಜು, ತಾಲೂಕಿನ ವ್ಯಾಪ್ತಿಯಲ್ಲಿ ಹಾಗೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಗಲದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಸೋಮವಾರಪೇಟೆ, ಕುಶಾಲನಗರ ಸೇರಿದಂತೆ ಎಲ್ಲೆಡೆ ವಾರದ ಸಂತೆಯನ್ನು ತಾ. 31ರ ತನಕ ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ಸುಂಟಿಕೊಪ್ಪ ವಿಭಾಗದಲ್ಲಿ
ಕಾಫಿ ತೋಟಗಳಿಗೆ ಕಾರ್ಮಿಕರನ್ನು ಕೆಲಸಗಳಿಗೆ ಕರೆದೊಯ್ಯುತ್ತಿದ್ದ ವಾಹನಗಳನ್ನು ಪೊಲೀಸರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಡೆದು ವಾಹನಗಳನ್ನು ಪರಿಶೀಲಿಸಿ ಎಚ್ಚರಿಕೆ ನೀಡಿ ಹಿಂತಿರುಗಿಸಿದರು.
ಜಿಲ್ಲೆಯ ಕಾಫಿ ತೋಟಗಳಲ್ಲಿ ಕಾಫಿ, ಕರಿಮೆಣಸು ಕೊಯ್ಲು ನಡೆಯುತ್ತಿದ್ದು ‘ಲಾಕ್‍ಡೌನ್’ ಆದೇಶದ ಬಗ್ಗೆ ಆರಿವಿಲ್ಲದ ವಾಹನ ಚಾಲಕರು ಎಂದಿನಂತೆ ಸುಂಟಿಕೊಪ್ಪ, ನಾಕೂರು, ಕಂಬಿಬಾಣೆ, ಕೊಡಗರಹಳ್ಳಿ, ಬಸವನಹಳ್ಳಿ, ಗುಡ್ಡೆಹೊಸೂರು, ಕೊಪ್ಪ, ರಾಣಿಗೇಟ್ ವಿವಿಧೆಡೆಗಳಿಂದ ಜೀಪ್ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದರು. ಆಟೋ ಚಾಲಕರು ಎಂದಿನಂತೆ ಆಟೋಗಳನ್ನು ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನಗಳನ್ನು ಬೆಳಿಗ್ಗೆ 8 ಗಂಟೆಯ ವೇಳೆಗೆ ತಡೆದು ಜಿಲ್ಲೆಗೆ ‘ಲಾಕ್‍ಡೌನ್’ ಆದೇಶ ಜಾರಿಯಾಗಿದೆ. ಕೊರೊನಾ ರೋಗವನ್ನು ನಿಯಂತ್ರಿಸುವ ದಿಸೆಯಲ್ಲಿ ಜನತೆಯು ತಮ್ಮ ಮನೆಗಳಲ್ಲಿಯೇ ಇರಬೇಕಾಗಿದೆ. ಆಟೋಗಳು ಬಾಡಿಗೆಗೆ ನಿಲ್ಲಿಸುವಂತಿಲ್ಲ ತೋಟಗಳಲ್ಲಿ ಕೂಲಿ ಕೆಲಸ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಗುಂಪು ಸೇರುವಂತಿಲ್ಲ ತಿಳಿಸಿದರು. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಬಿ.ತಿಮ್ಮಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಅವರು ವಾಹನಗಳನ್ನು ತಡೆದು ತಪಾಸಣೆ ನಡೆಸಿ ಕಾರ್ಮಿಕರನ್ನು ಕರೆದೊಯ್ಯುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು ಎಂದರು.
ಪಟ್ಟಣದಲ್ಲಿ ದಿನಸಿ ಅಂಗಡಿ, ಜೌಷಧಿ ಅಂಗಡಿ, ತರಕಾರಿ ಅಂಗಡಿ ಹೊರತುಪಡಿಸಿ ವಿವಿಧ ಅಂಗಡಿ ಹೊಟೇಲ್‍ಗಳನ್ನು ತೆರೆಯಲಾಗಿದ್ದು ಮುಚ್ಚುವಂತೆ ತಾಕೀತು ಮಾಡಿದರು. ಸುಂಟಿಕೊಪ್ಪ ಪೊಲೀಸ್ ಸಿಬ್ಬಂದಿಗಳು, ಪಂಚಾಯಿತಿ ಸಿಬ್ಬಂದಿಗಳು ಇದ್ದರು. ವಾಹನದ ಮೂಲಕ ಸಾರ್ವಜನಿಕರಿಗೆ ಮಾಹಿತಿಯನ್ನು ಗ್ರಾ.ಪಂ. ಹಾಗೂ ಪೊಲೀಸ್ ಠಾಣಾಧಿಕಾರಿಗಳು ನೀಡಿದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾ.ಪಂ. ವಿದೇಶಗಳಿಂದ ಸ್ವದೇಶಕ್ಕೆ ಆಗಮಿಸಿದ್ದ ವ್ಯಕ್ತಿಗಳಿಗೆ ಕ್ವಾರಂಟೈನ್ ಸ್ಟಾಂಪಿಂಗ್ ನಡೆಸಲಾಯಿತು.
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ವಿದೇಶಗಳಿಂದ ಸುಂಟಿಕೊಪ್ಪಕ್ಕೆ ಆಗಮಿಸಿರುವ 8 ಮಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿಯರು,ಆಶಾ ಕಾರ್ಯಕರ್ತೆಯರು ಮನೆ ಹಾಗೂ ಪಂಚಾಯಿತಿ ಕಛೇರಿಗೆ ಕರೆಸಿ ಕ್ವಾರಂಟೈನ್ ಸ್ಟಾಂಪಿಂಗ್ ನಡೆಸಿದರು. ಸಾರ್ವಜನಿಕರೊಂದಿಗೆ 15 ದಿನಗಳ ಕಾಲ ಸಂಪರ್ಕದಲ್ಲಿ ಇರದಂತೆ ಮನವರಿಕೆ ಮಾಡಿಕೊಟ್ಟರು.
ವರದಿ: ವಿಜಯ್, ನಾಗರಾಜ್ ಶೆಟ್ಟಿ, ನರೇಶ್ಚಂದ್ರ, ಚಂದ್ರಮೋಹನ್, ರಾಜು ರೈ