ಮಡಿಕೇರಿ, ಮಾ. 21 : ಕೊಡಗು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ಸೋಂಕು ಹರಡುವಿಕೆ ಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಜನತೆ ಕೊಡಗು ಜಿಲ್ಲಾ ಆಡಳಿತ ದೊಂದಿಗೆ ಕೈಜೋಡಿಸುವ ಮೂಲಕ ಸಮಾರೋಪಾದಿಯಲ್ಲಿ ಸ್ವಯಂ ಜಾಗೃತಿಗೊಂಡು ಹೋರಾಡುವಂತೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಕರೆ ನೀಡಿದ್ದಾರೆ. ಇಂದು ಜಿಲ್ಲೆಗೆ ಭೇಟಿ ನೀಡಿ ಅವರು ಜಿಲ್ಲಾ ಆಡಳಿತ ಭವನದಲ್ಲಿ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಗತ್ತಿನಲ್ಲಿ ತಲ್ಲಣಗೊಳಿಸಿರುವ ಕೊರೊನಾ ಬಗ್ಗೆ ಮಾಹಿತಿ ಪಡೆದು ಕೊಂಡರು. ಆ ಬಳಿಕ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಜನತೆ ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಭರವಸೆ ನೀಡಿದರು. ಕೊಡಗಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಪೂರ್ವ ನಿಗದಿಗೊಂಡಂತೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಮುಕ್ತ ವಾತಾವರಣದಲ್ಲಿ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ನೆನಪಿಸಿದರು. ಪ್ರತಿ ಕೇಂದ್ರದಲ್ಲಿ ಓರ್ವ ನರ್ಸ್ ಸಹಿತ ವಿದ್ಯಾರ್ಥಿಗಳಿಗೆ ತಪಾಸಣೆ ಮೂಲಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೆರ್ಯ ತುಂಬುವ ಕೆಲಸ ಮಾಡಲಾಗುತ್ತದೆ ಎಂದು ಸಚಿವರು ನುಡಿದರು.ತಾ. 27 ರಿಂದ ಎಸ್.ಎಸ್. ಎಲ್.ಸಿ. ಪರೀಕ್ಷೆ ಪ್ರಾರಂಭವಾಗಲಿದ್ದು, ಪರೀಕ್ಷೆ ನಡೆಯುವ 27 ಕೇಂದ್ರಗಳ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಪ್ರತೀ ಕೇಂದ್ರದಲ್ಲಿಯೂ ಓರ್ವ ನರ್ಸ್ ಸಹಿತ ಸುರಕ್ಷಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಮಾಸ್ಕ್ ಅನ್ನು ವಿತರಿಸಲಾಗುತ್ತದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆ ಬರೆಯಬಹುದಾಗಿದೆ ಎಂದು ಸಚಿವರು ಭರವಸೆ ನೀಡಿದರು.

ಮಡಿಕೇರಿಯಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕೊರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಉನ್ನತಾಧಿಕಾರಿಗಳ ಸಭೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿರುವುದಾಗಿ ನುಡಿದ ಸಚಿವರು ಕೊಡಗಿನಲ್ಲಿ ಕೊರೊನಾ ಸೋಂಕು ಪತ್ತೆಯಾದ ವ್ಯಕ್ತಿ ಸಂಪರ್ಕಿಸಿ ರಬಹುದಾದ ಇತರರನ್ನೂ ಪತ್ತೆ ಹಚ್ಚಿ ಆರೋಗ್ಯ ಇಲಾಖೆಯಿಂದ ತಪಾಸಣೆ ಮಾಡಲಾಗುತ್ತಿದೆ. ಕೊಡಗಿಗೆ ವಿದೇಶ ದಿಂದ ಬಂದಿರುವ 242 ಮಂದಿಗೆ ಈಗಾಗಲೇ

(ಮೊದಲ ಪುಟದಿಂದ) ಗೃಹಬಂಧನದಲ್ಲಿ ಇರಿಸಿ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದರು. ದುಬೈನಿಂದ ಕೊಡಗಿಗೆ ಮರಳಿದ ವ್ಯಕ್ತಿಯೋರ್ವ ಬೆಂಗಳೂರಿನಲ್ಲಿ ತನ್ನ ತಂಗಿ ಮನೆಗೆ ತೆರಳಿ ಬಿರಿಯಾನಿ ತಿಂದು ಸಾಕಷ್ಟು ಮಂದಿಯನ್ನು ಸಂಪರ್ಕಿಸಿ ನಂತರ ಕೊಡಗಿಗೆ ಬಂದಿದ್ದಾನೆ. ಈತನ ವೈದ್ಯಕೀಯ ಪರೀಕ್ಷಾ ವರದಿ ಇನ್ನಷ್ಟೇ ಲಭಿಸಬೇಕಾಗಿದೆ ಎಂದು ನೆನಪಿಸಿದ ಸಚಿವರು, ಕೊಡಗಿನಲ್ಲಿ ಕೊರೊನಾ ಸೋಂಕು ಹಬ್ಬದಂತೆ ಎಲ್ಲಾ ರೀತಿಯಲ್ಲಿಯೂ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಸಣ್ಣ ಲೋಪವೂ ಆಗದಂತೆ ನೋಡಿಕೊಳ್ಳಲಾಗಿದೆ. ಯಾವುದೇ ಕ್ರಮಕ್ಕೂ ಆರ್ಥಿಕ ಮುಗ್ಗಟ್ಟಿಲ್ಲ. ಈ ನಿಟ್ಟಿನಲ್ಲಿ ಮಾನಸಿಕ ಸ್ಥೆರ್ಯ ತುಂಬಿ, ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯವೂ ನಡೆಯಬೇಕಾಗಿದೆ ಎಂದ ಸಚಿವರು ಕೊರೊನಾ ಸೋಂಕಿತ ಮಂದಿಯ ಚಿಕಿತ್ಸೆ ವೆಚ್ಚವನ್ನು ಸರಕಾರವೇ ನೋಡಿಕೊಳ್ಳಲಿದೆ ಎಂದು ಭರವಸೆ ನೀಡಿದರು.

ಕೊಡಗಿನಲ್ಲಿ ಕಳೆದ ಎರಡು ವರ್ಷ ಸಂಭವಿಸಿರುವ ಪ್ರಾಕೃತಿಕ ವಿಪತ್ತು ಹಾಗೂ ಪ್ರಸ್ತುತ ಸನ್ನಿವೇಶದ ಅರಿವು ಸರಕಾರಕ್ಕೆ ಇದ್ದು ಜಿಲ್ಲೆಯ ಜನತೆಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಸರಕಾರ ಕಾಳಜಿ ತೋರಲಿದೆ ಎಂದು ಸಚಿವರು ಭರವಸೆ ನೀಡಿದರು. ಈ ಸಂಬಂಧ ಕೊಡಗು-ಕೇರಳ ಗಡಿಗಳು ಹಾಗೂ ಇತರ ಜಿಲ್ಲೆಗಳ ಗಡಿಗಳಲ್ಲಿಯೂ ಅಗತ್ಯ ಕ್ರಮದೊಂದಿಗೆ ಕೊರೊನಾ ಮತ್ತು ಹಕ್ಕಿಜ್ವರ ಹರಡದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿರುವುದು ಶ್ಲಾಘನೀಯವೆಂದು ನುಡಿದ ಸಚಿವರು, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರ ಸಹಿತ ಅಧಿಕಾರಿಗಳ ತಂಡದ ಕಾರ್ಯವನ್ನು ಪ್ರಶಂಸಿಸಿದರು.

ಜನತಾ ಕಫ್ರ್ಯೂಗೆ ಕರೆ : ಜಗತ್ತಿಗೆ ಸವಾಲಾಗಿರುವ ಕೊರೊನಾ ಸೋಂಕನ್ನು ತಡೆಗಟ್ಟಲು ಭಾನುವಾರ ದೇಶದ ಜನತೆಗೆ ಸ್ವಯಂ ಸಂಯಮದಿಂದ ಜನತಾ ಕಫ್ರ್ಯೂನಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಈ ಕರೆಗೆ ಓಗೊಟ್ಟು ಕೊಡಗಿನ ಜನತೆ ಸಹಕಾರ ನೀಡುವಂತೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಮನವಿ ಮಾಡಿದರು. ಪ್ರತಿಯೊಬ್ಬರು ಈ ದಿನ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮನೆಯಿಂದ ಹೊರಬಾರದಂತೆಯೂ ಹಾಗೂ ಸಂಜೆ 5.30ಕ್ಕೆ ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವವೆರಿಗೆ ಕೃತಜ್ಞತೆ ಸಲ್ಲಿಸುವಂತೆಯೂ ಪ್ರಧಾನಮಂತ್ರಿಗಳ ಸಲಹೆಯನ್ನು ಪಾಲಿಸಲು ಅವರು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪಿ., ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹಾ ಉಪಸ್ಥಿತರಿದ್ದರು. ಆ ಮುನ್ನ ನಡೆದ ಅಧಿಕಾರಿಗಳ ಸಭೆಯಲ್ಲಿ ಜನಪ್ರತಿನಿಧಿಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್, ಉಪವಿಭಾಗಾಧಿಕಾರಿ ಟಿ. ಜವರೇಗೌಡ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಕಾರ್ಯಪ್ಪ, ಡಾ. ಲೋಕೇಶ್, ಡಾ. ಮೇರಿ ನಾಣಯ್ಯ ಸೇರಿದಂತೆ ತಾಲೂಕು ತಹಶೀಲ್ದಾರರು, ಕಾರ್ಯನಿರ್ವಹಣಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಸಚಿವರಿಗೆ ಅನುಪಾಲನಾ ವರದಿ ನೀಡಿದರು.

ಎಂ.ಎಲ್.ಸಿ.ಗೆ ಅರಿವಿರಲಿ : ಸಂಸದ ಪ್ರತಾಪ್ ಸಿಂಹ

ಕೊಡಗು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ವಿಧಾನಪರಿಷತ್‍ನಲ್ಲಿ ಒತ್ತಾಯಿಸಿರುವ ಎಂ.ಎಲ್.ಸಿ. ವೀಣಾ ಅಚ್ಚಯ್ಯ ಅವರಿಗೆ ಸೂಪರ್ ಸ್ಪೆಷಾಲಿಟಿ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ನಡುವಿನ ವ್ಯತ್ಯಾಸವೇ ತಿಳಿದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ವ್ಯಾಖ್ಯನಿಸಿದ್ದಾರೆ. ಇಂದಿನ ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲಾ ವೈದ್ಯಕೀಯ ಆಸ್ಪತ್ರೆಯಲ್ಲಿ ಎಲ್ಲಾ ತುರ್ತು ಸೇವೆಗೆ ಈಗಾಗಲೇ ಆದ್ಯತೆ ನೀಡಲಾಗಿದ್ದು, ಈ ಆಸ್ಪತ್ರೆಯನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸುವ ಕೆಲಸ ಮುಂದುವರಿದಿದೆ ಎಂದು ಅಭಿಪ್ರಾಯಪಟ್ಟರು. ಈ ಬಗ್ಗೆ ಮೇಲ್ಮನೆ ಸದಸ್ಯರು ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವಂತೆಯೂ ಪ್ರತಿಯಾಡಿದರು.

ಕೊಡಗು ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಈಗಾಗಲೇ ಕೊಡಗು ವೈದ್ಯಕೀಯ ಕಾಲೇಜಿನ ಮೂಲಕ ಕಾರ್ಯನಿರ್ವಹಿಸುತ್ತಿದೆ. ಹೀಗಿರುವಾಗ ವಿಧಾನಪರಿಷತ್‍ನಲ್ಲಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಕೊಡಗಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಒತ್ತಾಯಿಸಿದ್ದರಲ್ಲಿ ಅರ್ಥವೇ ಇಲ್ಲ ಎಂದು ಟೀಕಿಸಿದರು. ಕೊಡಗಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೇ ಸ್ಥಳೀಯರ ಅಗತ್ಯತೆಗೆ ಸಾಕಾಗಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪರಿಕಲ್ಪನೆಯೇ ಬೇರೆಯದ್ದಾಗಿದೆ, ಇವುಗಳ ನಡುವಿನ ವ್ಯತ್ಯಾಸ ಎಂ.ಎಲ್.ಸಿ.ಗೆ ತಿಳಿದೇ ಇಲ್ಲ ಎಂದು ಪ್ರತಾಪ್ ಸಿಂಹ ಲೇವಡಿ ಮಾಡಿದರು.

ಕೊಡಗಿನಲ್ಲಿ ಜನತಾ ಕಫ್ರ್ಯೂವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಪ್ರತೀಯೋರ್ವ ನಾಗರಿಕನೂ ಪಾಲಿಸುವ ಮೂಲಕ ಕೊರೊನಾ ಸೋಂಕು ಹರಡದಂತೆ ಗಮನ ಹರಿಸುವಂತೆಯೂ ಸಂಸದರು ಮನವಿ ಮಾಡಿದರು.

ಕೊರೊನಾ ಸೋಂಕು ಬಹಳ ವೇಗವಾಗಿ ಹರಡುವ ಸಾಧ್ಯತೆಯಿದ್ದು, ಈ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಂಡು ಭಾನುವಾರ ಜನತಾ ಕಫ್ರ್ಯೂ ಸಂದರ್ಭ ಕೊಡಗಿನ ಜನ ಮನೆ ಬಿಟ್ಟು ಹೊರಬರಬಾರದೆಂದು ಅವರು ಕಳಕಳಿ ವ್ಯಕ್ತಪಡಿಸಿದರು.