ಮಡಿಕೇರಿ, ಮಾ. 21: ಮಾರಕ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ನೀಡಿರುವ ‘ಜನತಾಕಫ್ರ್ಯೂ’ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಜಿಲ್ಲೆಯಲ್ಲಿ ಹೆಚ್ಚುವರಿ ಎರಡು ದಿನಗಳ ಕಾಲ ಬಂದ್ ನಡೆಸುವ ನಿರ್ಧಾರ ಕೈಗೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಬಿ. ದೇವಯ್ಯ ಅವರು, ಭಾನುವಾರದ ‘ಜನತಾಕಫ್ರ್ಯೂ’ಗೆ ಬೆಂಬಲ ನೀಡುವುದರೊಂದಿಗೆ ಸೋಮವಾರ ಮತ್ತು ಮಂಗಳವಾರಕ್ಕೆ ಬಂದ್‍ನ್ನು ವಿಸ್ತರಿಸಿರುವುದಾಗಿ ತಿಳಿಸಿದರು. ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸುವಂತೆ ಚೇಂಬರ್‍ನ ಎಲ್ಲಾ ಸ್ಥಾನೀಯ ಸಮಿತಿಗಳ ಮೂಲಕ ವರ್ತಕ ಸಮುದಾಯದಲ್ಲಿ ಮನವಿ ಮಾಡಿಕೊಂಡಿರುವುದಾಗಿ ವಿವರಿಸಿದರು.ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಇಂದು ಇಡೀ ವಿಶ್ವವನ್ನು ವ್ಯಾಪಿಸಿ ಆತಂಕ ಮೂಡಿಸಿದೆ. ಈ ಸೋಂಕಿನ ನಿಯಂತ್ರಣಕ್ಕೆ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು. ಪ್ರಧಾನಮಂತ್ರಿಗಳ ಕರೆಯಂತೆ ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ ಬಂದ್ ಮಾಡಲಾಗುವುದು. ಕೊಡಗು ವ್ಯಾಪ್ತಿಯಲ್ಲಿ ಹೆಚ್ಚುವರಿ ಎರಡು ದಿನಗಳ ಕಾಲ ನಡೆಯುವ ಬಂದ್ ಸಂದರ್ಭ ಹಾಲು, ಔಷಧಿಯಂತಹ ಅವಶ್ಯಕ ವಸ್ತುಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಸೋಮವಾರ ಮತ್ತು ಮಂಗಳವಾರದ ಬಂದ್ ಸಂದರ್ಭ ಸಂಜೆಯ ವೇಳೆ ಅಗತ್ಯ ವಸ್ತುಗಳ ಮಾರಾಟ

(ಮೊದಲ ಪುಟದಿಂದ) ಮತ್ತು ಖರೀದಿಗೆ ಅವಕಾಶ ಕಲ್ಪಿಸಿರುವುದರಿಂದ ಜಿಲ್ಲೆಯ ಜನತೆ ಅನಗತ್ಯ ಆತಂಕ, ಗೊಂದಲಕ್ಕೆ ಒಳಗಾಗುವುದು ಬೇಡ. ಪ್ರತಿಯೊಬ್ಬರು ಕೊರೊನಾ ವೈರಸ್ ಸೋಂಕಿನ ವಿರುದ್ಧವಾದ ನಮ್ಮ ಹೋರಾಟಕ್ಕೆ ಶಾಂತಿಯುತವಾಗಿ ಸಹಕರಿಸಬೇಕು ಮತ್ತು ಮಾರಕ ವೈರಾಣುವಿನ ವಿರುದ್ಧದ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೆಗೆದುಕೊಳ್ಳುವ ಕ್ರಮಗಳಿಗೆ ನೆರವನ್ನು ನೀಡಬೇಕೆಂದು ಮನವಿ ಮಾಡಿದರು.

ಮೂರು ಗಂಟೆ ವಿನಾಯಿತಿ

ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷರ ಹಾಗೂ ಪೋಷಕ ಜಿ. ಚಿದ್ವಿಲಾಸ್ ಮಾತನಾಡಿ, ‘ಜನತಾಕಫ್ರ್ಯೂ’ ಜೊತೆಯಲ್ಲೆ ಮತ್ತೆರಡು ದಿನ ಬಂದ್ ಎನ್ನುವ ಕಾರಣಕ್ಕೆ ಜನತೆ ಆತಂಕಗೊಳ್ಳುವ ಅಗತ್ಯವಿಲ್ಲ. ಬಂದ್‍ನ ಎರಡು ದಿನಗಳ ಕಾಲ ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ದಿನಸಿ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಮಾರಾಟಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು. ಜಿಲ್ಲೆಯ ಜನತೆಯ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಜಿಲ್ಲಾಡಳಿತಕ್ಕೂ ಮಾನಸಿಕ ಬೆಂಬಲ ಕಲ್ಪಿಸುವ ಉದ್ದೇಶವೂ ಇದರಲ್ಲಿದೆ ಎಂದರು.

ವರ್ತಕ ಸಮುದಾಯ ಒಳಗೊಂಡಂತೆ ಜಿಲ್ಲೆಯ ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ, ಕೊರೊನಾ ಹೆಮ್ಮಾರಿಯನ್ನು ತೊಲಗಿಸುವ ಉದ್ದೇಶಗಳಿಂದ ಎರಡು ದಿನಗಳ ಹೆಚ್ಚುವರಿ ಬಂದ್‍ಗೆ ಜಿಲ್ಲಾ ಚೇಂಬರ್ ನಿರ್ಧಾರ ತೆಗೆದುಕೊಂಡಿದೆ. ತಮ್ಮ ಈ ನಿಲುವಿಗೆ ಬೆಂಬಲ ನೀಡುವಂತೆ ಕೊಡಗು ಜಿಲ್ಲಾ ಬಸ್ ಮಾಲೀಕರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಮನವಿ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು.

ರಾಜ್ಯ ಸರ್ಕಾರ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದೇ ಮಾ.31ರವರೆಗೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದೆ. ಈ ಅವಧಿಯ ಬಳಿಕವೂ ಜಿಲ್ಲೆಯ ಜನತೆ ಅತ್ಯಂತ ಎಚ್ಚರಿಕೆಯ ಹೆಜ್ಜೆಗಳನ್ನಿರಿಸಬೇಕು. ಜಿಲ್ಲೆಗೆ ಬರುವ ಪ್ರವಾಸಿಗರ ಬಗ್ಗೆ ಮಾಹಿತಿ ನೀಡುವುದರಿಂದ ಹಿಡಿದು, ಸೋಂಕಿನ ಯಾವುದೇ ಲಕ್ಷಣವಿದ್ದರೂ ತಕ್ಷಣವೆ ಎಚ್ಚೆತ್ತುಕೊಂಡು ಅಗತ್ಯ ಚಿಕಿತ್ಸ್ಸೆಗೆ ಒಳಗಾಗಬೇಕು. ವೈರಸ್ ವಿರುದ್ಧವಾದ ಆಂದೋಲನದಲ್ಲಿ ಪ್ರತಿಯೊಬ್ಬರೂ ಭಾಗಿಗಳಾಗಬೇಕೆಂದು ಅವರು ಕೋರಿದರು.

ಸಂಘÀಟನಾ ಕಾರ್ಯದರ್ಶಿ ಮೋಂತಿ ಗಣೇಶ್ ಮಾತನಾಡಿ, ಜನಪರವಾದ ಮೂರು ದಿನಗಳ ಬಂದ್‍ಗೆ ಜನರು ಸಹಕರಿಸುವಂತೆ ಮನವಿ ಮಾಡಿದರು. ಕೊರೊನಾ ವೈರಸ್ ಹರಡುವ ಕುರಿತು ಯಾರೂ ನಿರ್ಲಕ್ಷ್ಯ ವಹಿಸಬಾರದು ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ, ನಗರಾಧ್ಯಕ್ಷ ಬಿ.ಎಂ.ಧನಂಜಯ ಹಾಗೂ ನಗರ ಪ್ರಧಾನ ಕಾರ್ಯದರ್ಶಿ ಸಂತೋಷ್ ಅಣ್ವೇಕರ್ ಉಪಸ್ಥಿತರಿದ್ದರು.