(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಮಾ. 21: ಕೊರೊನಾ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಗೋಣಿಕೊಪ್ಪ ನಗರದಲ್ಲಿ ಚಿನ್ನ ಬೆಳ್ಳಿ ವರ್ತಕರ ಹಾಗೂ ಕೆಲಸಗಾರರ ಸಂಘವು ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಮಾಡಿದ್ದಾರೆ. ಸಾರ್ವಜನಿಕರು ಸಹಕರಿಸುವಂತೆ ಹಾಗೂ ಕೊರೊನಾ ವೈರಸ್ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಅಂಗಡಿಯ ಬಾಗಿಲುಗಳಲ್ಲಿ ಜಾಗೃತಿ ಮೂಡಿಸುವ ನಾಮಫಲಕವನ್ನು ಅಳವಡಿಸಿದ್ದಾರೆ.
ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯ್ತಿ ವತಿಯಿಂದ ಪೌರ ಕಾರ್ಮಿಕರು, ಜನನಿಬಿಡ ಪ್ರದೇಶ,ಮಾರ್ಕೆಟ್, ಮುಖ್ಯ ರಸ್ತೆಯ ಚರಂಡಿಗಳಿಗೆ ಔಷಧಿಗಳನ್ನು ಸಿಂಪಡಿಸುವ ಕೆಲಸ ನಿರ್ವಹಿಸುತ್ತಿದ್ದಾರೆ. ಖಾಸಗಿ ಬಸ್ಗಳು ಗ್ರಾಮೀಣ ಪ್ರದೇಶದತ್ತ ಸಂಚಾರವನ್ನು ನಿಲ್ಲಿಸಿವೆ. ಕೆಲವು ಖಾಸಗಿ ಬಸ್ಗಳು ನಿಲ್ದಾಣದಲ್ಲಿಯೇ ಪ್ರಯಾಣಿಕರಿಲ್ಲದೆ ನಿಂತಿವೆ. ನಗರದಲ್ಲಿ ಕುರಿ, ಕೋಳಿ, ಹಂದಿ ಮಾಂಸ ಹಾಗೂ ಮೀನು ವ್ಯಾಪಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಕೆಲವು ಅಂಗಡಿಗಳಲ್ಲಿ ಸಾರ್ವಜನಿಕರು ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡು ಬಂತು ನಿತ್ಯ ಬಳಕೆಯ ವಸ್ತುಗಳು ಹಾಗೂ ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಇತರ ಅಂಗಡಿಗಳಲ್ಲಿ ವ್ಯಾಪಾರ ಅತ್ಯಂತ ವಿರಳವಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಪಂಚಾಯಿತಿಯ ಕಚೇರಿಗೆ ತುರ್ತು ಅಗತ್ಯ ಸೇವೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ನ್ಯಾಯಾಲಯ ಆಸ್ಪತ್ರೆ, ಬ್ಯಾಂಕುಗಳು ಸೇರಿದಂತೆ ಇತರ ಕಚೇರಿಗಳಲ್ಲಿ ಜನದÀಟ್ಟಣ ವಿರಳವಾಗಿತ್ತು. ನಗರದಿಂದ ಸಂಚರಿಸುವ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಕರು ಹೆಚ್ಚಾಗಿ ಕಂಡು ಬರಲಿಲ್ಲ. ಸದಾ ಜನಸಂದಣಿಯಿಂದ ಕೂಡಿರುತ್ತಿದ್ದ ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ತೀರ ವಿರಳವಾಗಿತ್ತು. ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ಅಷ್ಟಾಗಿ ಕಂಡು ಬರಲಿಲ್ಲ. ಕೆಲವು ಹೊಟೇಲುಗಳು ತೆರೆದಿದ್ದರೂ ಗ್ರಾಹಕರು ಮಾತ್ರ ಹೊಟೇಲ್ನತ್ತ ಸುಳಿಯುತ್ತಿರಲಿಲ್ಲ. ಬಹುತೇಕ ನಾಗರಿಕರು ಮಾಸ್ಕ್ ಧರಿಸಿಕೊಂಡು ಓಡಾಟ ನಡೆಸುತ್ತಿರುವುದು, ವಾಹನ ಚಾಲನೆ ಮಾಡುತ್ತಿರುವುದು ಕಂಡುಬಂತು. ಪೊಲೀಸ್ ಠಾಣೆಯ ಸಿಬ್ಬಂದಿ ಮಾಸ್ಕ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದರು.ಜ್ಯುವೆಲ್ಲರಿ ಅಂಗಡಿಗಳಿಗೆ ನಾಗರಿಕರು ಹೆಚ್ಚಾಗಿ ಆಗಮಿಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಂಘವು ತುರ್ತು ಸಭೆ ನಡೆಸಿ ಮೂರು ದಿನಗಳ ಕಾಲ ಜ್ಯುವೆಲ್ಲರಿ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಸಾರ್ವಜನಿಕರು ಕೊರೊನಾದ ಬಗ್ಗೆ ಹೆಚ್ಚಿನ ಮುರ್ತುವಜಿ ವಹಿಸಬೇಕು. ವ್ಯಾಪಾರ ವಹಿವಾಟು ಕಡಿಮೆ ಇದ್ದರೂ ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಅಂಗಡಿಗಳನ್ನು ಬಂದ್ ಮಾಡಿದ್ದೇವೆ.
-ಎಂ.ಜಿ. ಮೋಹನ್, ಹಿರಿಯ ವರ್ತಕರು
ಆಟೋ ಮಾಲೀಕರಿಗೆ ಹಾಗೂ ಚಾಲಕರಿಗೆ ಕೊರೊನಾ ಹರಡುವ ಭಯವಿದೆ. ಆರ್ಥಿಕ ಸ್ಥಿತಿ ಸಂಪೂರ್ಣ ಕುಸಿದಿದೆ. ದಿನನಿತ್ಯ ಸಾಮಗ್ರಿಗಳನ್ನು ಖರೀದಿಸಲು ಕಷ್ಟಸಾಧ್ಯವಾಗಿದೆ. ಇದನ್ನೇ ನಂಬಿ ಜೀವನ ಸಾಗಿಸುತ್ತಿರುವ ನಮಗೆ ಫೈನಾನ್ಸ್ ಕಂಪೆನಿಯವರು ಪಡೆದ ಸಾಲವನ್ನು ಕಡ್ಡಾಯವಾಗಿ ಕಟ್ಟುವಂತೆ ಒತ್ತಾಯ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಲವನ್ನು ಕಟ್ಟಲು ಚಾಲಕರಿಗೆ ಸಾಧ್ಯವಾಗುತ್ತಿಲ್ಲ. ಪ್ರತಿಯೊಬ್ಬ ಚಾಲಕರಿಗೂ ಇಲಾಖೆ ವತಿಯಿಂದ ಉಚಿತವಾಗಿ ಮಾಸ್ಕ್ ನೀಡುವಂತೆ ಮನವಿ ಮಾಡುತ್ತೇವೆ. ಪ್ರಧಾನಿ ಮೋದಿಯವರು ಕರೆ ನೀಡಿದ ಹಿನ್ನಲೆಯಲ್ಲಿ ಆಟೋ ಸ್ಥಗಿತಗೊಳಿಸಿ ಜನತಾ ಕಫ್ರ್ಯೂಗೆ ಬೆಂಬಲ ಸೂಚಿಸುತ್ತೇವೆ.
-ಜಪ್ಪು ಸುಬ್ಬಯ್ಯ, ಉಪಾಧ್ಯಕ್ಷರು ಆಟೋ ಚಾಲಕರ ಸಂಘ