ಸಿದ್ದಾಪುರ, ಮಾ. 21: ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕನೋರ್ವ ಗಂಭೀರ ಗಾಯಗೊಂಡಿರುವ ಘಟನೆ ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ನೋಕ್ಯ ಗ್ರಾಮದಲ್ಲಿ ನಡೆದಿದೆ. ನೋಕ್ಯ ಗ್ರಾಮದ ಕಳತೋಡು ಕಾಲೋನಿಯ ನಿವಾಸಿ ಕಾವಲ (45) ಎಂಬವರು ಶುಕ್ರವಾರ ರಾತ್ರಿ ಮನೆಯಿಂದ ಅಂಗಡಿಗೆ ಸಾಮಗ್ರಿ ಖರೀದಿಸಲು ಹೋಗಿ ಬರುತ್ತಿದ್ದ ಸಂದರ್ಭ ಒಂಟಿಸಲಗವೊಂದು ಸಮೀಪದ ರಸ್ತೆಬದಿಯಲ್ಲಿ ಹಲಸಿನಕಾಯಿ ತಿನ್ನುತಿತ್ತು ಎನ್ನಲಾಗಿದೆ.
ಈ ಸಂದರ್ಭ ಕಾಲ್ನಡಿಗೆಯಲ್ಲಿ ಬರುತ್ತಿದ್ದ ಕಾವಲ ಅವರನ್ನು ಒಂಟಿಸಲಗ ಬೆನ್ನಟ್ಟಿ ದಾಳಿ ನಡೆಸಿದೆ. ಅಲ್ಲದೆ ಸೊಂಡಿಲಿನಿಂದ ಎತ್ತಿ ಎಸೆದಿದೆ. ಇದರಿಂದಾಗಿ ಕಾರ್ಮಿಕ ಕಾವಲ ಅವರ ಬಲಗಾಲಿನ ಮೂಳೆ ಮುರಿದಿದೆ. ಅಲ್ಲದೆ ಎದೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ಗಾಯಾಳು ರಸ್ತೆಯಲ್ಲಿ ಕಿರುಚಿಕೊಂಡಾಗ ಸಮೀಪದ ನಿವಾಸಿಗಳು ಆಗಮಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಾಯಾಳು ಕಾವಲ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹಾಗೂ ಶಂಕರ್ ಮತ್ತು ಉಪವಲಯ ಅರಣ್ಯಾಧಿಕಾರಿಗಳು, ಚಾಲಕ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಿತಿಮತಿ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.