ನಾಪೋಕ್ಲು, ಮಾ. 21: ಕೊರೊನಾ ಸೋಂಕು ಪೀಡಿತ ವ್ಯಕ್ತಿಯು ತನ್ನ ಸಂಬಂಧಿಗಳು ಮತ್ತು ಆಪ್ತರ ಮನೆಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ, ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯ್ತಿ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಪಂಚಾಯ್ತಿಯ ಆದೇಶದ ಮೇರೆಗೆ ಶನಿವಾರದಿಂದ ಕಕ್ಕಬ್ಬೆ ಪಟ್ಟಣ ಬಂದ್ ಮಾಡಲಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ ವ್ಯಾಪಾರಿಗಳು, ಬಂದ್‍ಗೆ ಸಹಕಾರ ನೀಡಿದರು. ಇದರಿಂದಾಗಿ ಪಟ್ಟಣ ಬಿಕೋ ಎನ್ನುತಿತ್ತು. ಸೋಂಕಿತ ವ್ಯಕ್ತಿಯು ಕುಂಜಿಲ ಗ್ರಾಮದ ತನ್ನ ಸಹೋದರಿ ಮನೆಗೆ ಹಾಗೂ ಊರಿನ ದರ್ಗಾಕ್ಕೆ ಭೇಟಿ ನೀಡಿದ್ದರು. ಈ ಹಿಂದೆ ಮಾಂಸ ಮಳಿಗೆಗಳನ್ನು ಮಾತ್ರ ಮುಚ್ಚಲು ಆದೇಶಿಸಿದ್ದ ಪಂಚಾಯ್ತಿ ಇದೀಗ ಎಲ್ಲಾ ದಿನಸಿ ಅಂಗಡಿ, ತರಕಾರಿ ಮತ್ತಿತರ ಎಲ್ಲ ಮಳಿಗೆಗಳನ್ನು ಮುಚ್ಚಲು ಆದೇಶ ಮಾಡಿತ್ತು. ಈ ಆದೇಶವು ತಾ. 31ರವರೆಗೂ ಜಾರಿಯಲ್ಲಿರುತ್ತದೆ ಎಂದು ಪಂಚಾಯ್ತಿ, ತಿಳಿಸಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದರೆ ದಂಡ ವಿಧಿಸುವುದಲ್ಲದೆ, ಸೂಕ್ತ ಕಾನೂನು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಪಂಚಾಯ್ತಿ ಪಿಡಿಓ ತಿಳಿಸಿದ್ದಾರೆ. - ದುಗ್ಗಳ