ಶನಿವಾರಸಂತೆ, ಮಾ. 21: ಜಿಲ್ಲಾಧಿಕಾರಿ ಆದೇಶದನ್ವಯ ಗ್ರಾಮ ಪಂಚಾಯಿತಿ ಶನಿವಾರ ವಾರದ ಸಂತೆಯನ್ನು ರದ್ದುಪಡಿಸಿತ್ತು. ವಿಶಾಲವಾದ ಮಾರುಕಟ್ಟೆಯ ದ್ವಾರಕ್ಕೆ ಬೀಗ ಜಡಿಯಲಾಗಿತ್ತು. ಒಳಭಾಗದ ಹಸಿರುಮೆಣಸಿನಕಾಯಿ, ಶುಂಠಿ, ತರಕಾರಿ, ದಿನಸಿ, ಹಣ್ಣು - ಹಂಪಲು, ಬಟ್ಟೆ, ಪ್ಲಾಸ್ಟಿಕ್ ವಸ್ತುಗಳ ಮಳಿಗೆಗಳು ಖಾಲಿಖಾಲಿಯಾಗಿ ಬಣಗುಡುತ್ತಿದ್ದವು. ವ್ಯಾಪಾರಿಗಳು, ಗ್ರಾಹಕರಿಂದ ಗಿಜಿಗುಡುತ್ತಿದ್ದ ಸಂತೆ ಮಾರುಕಟ್ಟೆ ಬಿಕೋ ಎನ್ನುತ್ತಿತ್ತು.
ಮಾರುಕಟ್ಟೆಯ ಹೊರಭಾಗ ರಸ್ತೆಯಂಚಿನಲ್ಲಿ ಕುಳಿತ ಬೆರಳೆಣಿಕೆಯ ವ್ಯಾಪಾರಿಗಳು ಟೊಮೆಟೊ, ತರಕಾರಿ, ಈರುಳ್ಳಿ, ಆಲೂಗಡ್ಡೆ, ಶುಂಠಿ, ಬೆಳ್ಳುಳ್ಳಿ ಇತ್ಯಾದಿಗಳನ್ನು ಮಾರಾಟ ಮಾಡುತ್ತಿದ್ದರು. ಪಟ್ಟಣ ಸುತ್ತಮುತ್ತಲ ಹಳ್ಳಿಗಳಿಂದ ಬಂದ ಗ್ರಾಹಕರು ಮುಗಿಬಿದ್ದು, ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂದಿತು.
ಭಾನುವಾರದ ಜನತಾ ಕಫ್ರ್ಯೂ ಮುಂದುವರೆಯಬಹುದು ಎಂಬ ಭಾವನೆಯಿಂದ ಜನತೆ ಪಟ್ಟಣದ ಅಂಗಡಿಗಳಲ್ಲೂ ಸರತಿ ಸಾಲಿನಲ್ಲಿ ನಿಂತು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದರು.