ವೀರಾಜಪೇಟೆ, ಮಾ.20: ಮಹಾ ಮಾರಿ ಕೊರೊನ ವೈರಸ್ ಹರಡುವ ಭೀತಿಯಿಂದ ಇಂದು ಸರಕಾರಿ ಕಚೇರಿಗಳು ಖಾಲಿ ಖಾಲಿ ಇದ್ದವು. ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿಯೂ ಜನಸಂಖ್ಯೆ ವಿರಳವಾಗಿತ್ತು. ಕೊರೊನ ವೈರಸ್‍ನ ರೋಗದ ಭೀತಿಗೆ ಜನರು ಕಂಗಾಲಾಗಿದ್ದು ಜಿಲ್ಲೆಯಲ್ಲಿ 144 ವಿಧಿ ಜಾರಿಯಲ್ಲಿರುವುದರಿಂದ ಸಭೆ ಸಮಾರಂಭಗಳಿಗೆ ನಿರ್ಬಂಧದ ಹಿನೆÀ್ನಲೆಯಲ್ಲಿ ವೀರಾಜಪೇಟೆ ಪಟ್ಟಣದಲ್ಲಿಯೂ ಜನ ಸಂಚಾರ ಕಡಿಮೆ ಇತ್ತು.

ಪಟ್ಟಣ ಪಂಚಾಯಿತಿ, ಸಮುಚ್ಚಯ ನ್ಯಾಯಾಲಯ, ಸಾರ್ವಜನಿಕ ಆಸ್ಪತ್ರೆಗಳಲ್ಲಿಯೂ ಜನರು ಕಡಿಮೆಯಿದ್ದು ಮುಖ್ಯ ರಸ್ತೆಯಲ್ಲಿ ಅಂಗಡಿ ಮುಂಗಟ್ಟು ಎಂದಿನಂತೆ ತೆರೆದಿದ್ದರೂ ಹೊಟೇಲ್ ಹಾಗೂ ಅಂಗಡಿಗಳಲ್ಲಿ ವ್ಯಾಪಾರ ಕಡಿಮೆ ಇದ್ದು ವರ್ತಕರು ಕೊರೊನಾ ವೈರಸ್‍ನಿಂದ ತತ್ತರಿಸಿದಂತಾಗಿದೆ. ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳು ಮಾತ್ರ ಹಾಜರಿದ್ದರು. ಪಟ್ಟಣ ಪಂಚಾಯಿತಿಯ ಕಚೇರಿ ಮುಂದಿನ ಗೇಟ್ ಬಂದ್ ಮಾಡಲಾಗಿತ್ತು. ಮಾರ್ಚ್ 31ರವರೆಗೆ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ತುರ್ತು ಕೆಲಸಗಳಿಗೆ ಮಾತ್ರ ಅವಕಾಶವಿದೆ. ಇನ್ನಿತರ ಕೆಲಸಗಳಿಗೆ ತಾ.31 ರ ನಂತರ ಪಟ್ಟಣ ಪಂಚಾಯಿತಿಯನ್ನು ಸಂಪರ್ಕಿಸಬಹುದು ಎಂದು ಗೇಟ್ ಮುಂದೆ ನಾಮ ಫಲಕ ಅಳವಡಿಸಲಾಗಿದ್ದರಿಂದ ಇಂದು ಬೆಳಗ್ಗಿನಿಂದಲೇ ಈ ಕಚೇರಿಯತ್ತ ಯಾರೂ ಸುಳಿಯದಿರುವುದು ಕಂಡು ಬಂತು.

ಖಾಸಗಿ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿದ್ದರಿಂದ ಖಾಸಗಿ ಬಸ್ಸುಗಳು ಖಾಲಿ ಖಾಲಿಯಾಗಿ ನಿಂತಿದ್ದವು. ಅಂತರರಾಜ್ಯ ಪರವಾನಗಿ ಹೊಂದಿರುವ ಆರು ಖಾಸಗಿ ಬಸ್ಸು ಮಾರ್ಗದಲ್ಲಿ ಮೂರು ಬಸ್ಸುಗಳು ಮಾತ್ರ ಸಂಚರಿಸುತ್ತಿದ್ದರೂ ಈ ಬಸ್ಸುಗಳಿಗೂ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಇರಲಿಲ್ಲ. ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣದಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಗೆ ತೆರಳಲು ಬಸ್ಸುಗಳಿದ್ದರೂ ಪ್ರಯಾಣಿಕರಿಲ್ಲದ್ದರಿಂದ ನಿಗದಿಪಡಿಸಿದ ಸಮಯಕ್ಕೆ ಬಸ್ಸುಗಳು ಹೊರಡಲು ಸಾಧ್ಯವಾಗುತ್ತಿಲ್ಲ. ಡಿಪೋ ಅಧಿಕಾರಿಗಳು ಸ್ವಯಂಪ್ರೇರಣೆಯಿಂದ ಖಾಲಿಯಾಗಿ ತೆರಳುವ ಬಸ್ಸು ಮಾರ್ಗವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿರುವುದಾಗಿ ಹೇಳಲಾಗಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ತಾ. 17ರಿಂದ ಇಂದಿನ ತನಕ ವಿದೇಶದಿಂದ ಬಂದ 22ಮಂದಿ ಆರೋಗ್ಯ ಇಲಾಖೆಯ ಸ್ವಯಂ ಘೋಷಣೆ ಪತ್ರಕ್ಕೆ ಸಹಿ ಹಾಕಿದ್ದಾರೆ. ದುಬೈ, ಅಬುಧಾಬಿ, ಒಮನ್, ಕುವೈತ್, ಶಾರ್ಜಾ ಸೇರಿದಂತೆ ವಿವಿಧೆಡೆಗಳಿಂದ ವೀರಾಜಪೇಟೆಗೆ ಬಂದ ಎಲ್ಲರ ಮಾಹಿತಿಯನ್ನು ಆಸ್ಪತ್ರೆಯ ಆರೋಗ್ಯ ತಂಡದ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಪಡೆದಿದ್ದಾರೆ. ವಿದೇಶದಿಂದ ಇವರೆಲ್ಲರೂ ವೀರಾಜಪೇಟೆ ಬಳಿಯ ಕೊಟ್ಟೋಳಿ, ಗುಂಡಿಗೆರೆ, ಕೊಟ್ಟಮುಡಿ, ಮೊಗರಗಲ್ಲಿ, ಚೋಕಂಡಳ್ಳಿ ನಿವಾಸಿಗಳಾಗಿದ್ದಾರೆ. ಎಲ್ಲರೂ ಮನೆಯಲ್ಲಿಯೇ ನಿಗಾದಲ್ಲಿರುವಂತೆಯೂ ಹೊರಗೆ ಯಾರನ್ನೂ ಸಂಪರ್ಕಿಸದಂತೆ ನಿರ್ಬಂಧ ವಿಧಿಸಿ ಮನೆಗೆ ಕಳಿಸಲಾಗಿದೆ ಎಂದು ವಿಶ್ವನಾಥ್ ಸಿಂಪಿ ತಿಳಿಸಿದ್ದಾರೆ.

ಮಸೀದಿಗಳಲ್ಲಿ ಪ್ರಾರ್ಥನೆ ಮೊಟಕು

ಪ್ರತಿ ಶುಕ್ರವಾರ ಮುಸ್ಲಿಮರು ಅಪರಾಹ್ನ ಮಸೀದಿಗೆ ತೆರಳಿ ಸುಮಾರು 45 ನಿಮಿóಷಗಳ ಕಾಲ ಪ್ರಾರ್ಥನೆ ಸಲ್ಲಿಸುತ್ತಿದ್ದವರು ಪ್ರಾರ್ಥನೆಯನ್ನು 15 ನಿಮಿಷಗಳಿಗೆ ಸೀಮಿತಗೊಳಿಸಿದ್ದಾರೆ. ಎಲ್ಲ ಮಸೀದಿಗಳಲ್ಲೂ ಇದೇ ರೀತಿ 15 ನಿಮಿಷಗಳ ಕಾಲದ ಪ್ರಾರ್ಥನೆ ನಡೆದಿದೆ.