ಸೋಮವಾರಪೇಟೆ,ಮಾ.20: ಮಾರಕ ಕೊರೊನಾ ವೈರಸ್ ಆತಂಕದ ಹಿನ್ನೆಲೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ನಡೆಯುವ ಮದುವೆ ಸೇರಿದಂತೆ ಸಭೆ, ಸಮಾರಂಭಗಳನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಿ ಪ.ಪಂ. ಮುಖ್ಯಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಈಗಾಗಲೇ ನಿಗದಿಯಾಗಿರುವ ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳನ್ನೂ ಸಹ ತಾತ್ಕಾಲಿಕವಾಗಿ ಮುಂದೂಡುವಂತೆ ಆದೇಶಿಸಲಾಗಿದ್ದು, ಇದನ್ನು ಮೀರಿದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಮಾಂಸ-ಮೀನು ಮಾರಾಟ ಬಂದ್: ಇದರೊಂದಿಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಸಿ ಮಾಂಸ, ಮೀನು ಮಾರಾಟವನ್ನು ಸಹ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಪಟ್ಟಣದಲ್ಲಿರುವ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮತ್ತು ಎಲ್ಲಾ ರೀತಿಯ ಮಾಂಸ ಮಾರಾಟವನ್ನು ರದ್ದುಗೊಳಿಸಿದ್ದು, ಒಂದು ವೇಳೆ ಆದೇಶ ಮೀರಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವದು ಎಂದು ಮುಖ್ಯಾಧಿಕಾರಿ ರಮೇಶ್ ತಿಳಿಸಿದ್ದಾರೆ.

ಸಂತೆ ರದ್ದು: ತಾ. 23 ಹಾಗೂ 30ರ ಸೋಮವಾರದಂದು ನಡೆಯುವ ಸೋಮವಾರಪೇಟೆ ಸಂತೆಯನ್ನು ಸಂಪೂರ್ಣವಾಗಿ ರದ್ದು ಗೊಳಿಸಲಾಗಿದೆ. ಇದಕ್ಕೆ ಬೇಕಾದ ಸೂಕ್ತ ಬಂದೋಬಸ್ತ್ ಒದಗಿಸಿ ಪಟ್ಟಣ ಪಂಚಾಯಿತಿಯೊಂದಿಗೆ ಸಹಕರಿಸ ಬೇಕೆಂದು ತಹಶೀಲ್ದಾರ್‍ಗೆ ಪ.ಪಂ.ನಿಂದ ಮನವಿ ಸಲ್ಲಿಸಲಾಗಿದೆ.