ಮಡಿಕೇರಿ, ಮಾ. 20: ಸಂಪಾಜೆ ಪಯಸ್ವಿನಿ ಕೃಷಿ ಪ್ರಾಥಮಿಕ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಾಗಿದ್ದ ಬಾಲಚಂದ್ರ ಕಳಗಿ ಹತ್ಯೆಯಾಗಿ ತಾ. 19ಕ್ಕೆ ಒಂದು ವರ್ಷವಾಗಿದ್ದು; ಅವರ ಸಾವಿನ ಸಂಬಂಧ ಸಿಓಡಿ ತನಿಖೆ ನಡೆಸುವಂತೆ ಕಳಗಿ ಕುಟುಂಬಸ್ಥರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.

ನಿನ್ನೆ ಸಂಪಾಜೆಯ ಪಯಸ್ವಿನಿ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ; ಬಾಲಚಂದ್ರ ಕಳಗಿ ಬಲಿದಾನ ದಿವಸ ಆಚರಣೆಯೊಂದಿಗೆ; ಕಳಗಿ ಅಭಿಮಾನಿ ಬಳಗದಿಂದ ಶ್ರದ್ಧಾಂಜಲಿ ಹಾಗೂ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭ ಬಾಲಚಂದ್ರ ಕಳಗಿ ಅವರ ಬದುಕಿನಲ್ಲಿ ವಿವಿಧ ರಂಗದ ಸೇವೆಯನ್ನು ಪತ್ರಕರ್ತ ಚಿ.ನಾ. ಸೋಮೇಶ್, ಪಯಸ್ವಿನಿ ಬ್ಯಾಂಕ್ ಅಧ್ಯಕ್ಷ ಅನಂತ್, ಅಲ್ಲಿನ ಗ್ರಾ.ಪಂ. ಅಧ್ಯಕ್ಷ ಕುಮಾರ್ ಅವರುಗಳು ಸ್ಮರಿಸುತ್ತಾ; ಅನ್ಯಾಯದ ವಿರುದ್ಧ ಸಂಪಾಜೆ ಜನತೆಯ ಧ್ವನಿಯಾಗಿದ್ದ ಬಾಲಚಂದ್ರ ಕಳಗಿ ಸಮಾಜಘಾತುಕರಿಂದ ಕೊಲೆಗೀಡಾಗಿದ್ದು; ಕಾನೂನಿನಡಿ ತಕ್ಕ ಶಿಕ್ಷೆಯಾಗಬೇಕೆಂದು ಅಭಿಪ್ರಾಯಪಟ್ಟರು.

ಅಲ್ಲದೆ ಬಾಲಚಂದ್ರ ಕಳಗಿ ಅವರ ಸೇವೆ ಇತರರಿಗೆ ಸ್ಫೂರ್ತಿಯಾಗಿದ್ದು; ಯುವ ಜನತೆ ಅದನ್ನು ಮುಂದುವರೆಸುವಂತೆ ಕರೆ ನೀಡಿದರು. ಮೃತರ ತಂದೆ ವೆಂಕಪ್ಪ ಕಳಗಿ ಹಾಗೂ ಪತ್ನಿ ಗ್ರಾ.ಪಂ. ಸದಸ್ಯೆ ರಮಾದೇವಿ ಕಳಗಿ ಕೂಡ ನುಡಿ ನಮನ ಸಲ್ಲಿಸಿದರು.

ಈ ವೇಳೆ ‘ಶಕ್ತಿ’ಯೊಂದಿಗೆ ಮಾತನಾಡಿದ ಬಾಲಚಂದ್ರ ಕಳಗಿ ಅವರ ತಂದೆ ಹಾಗೂ ಪತ್ನಿ; ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಾವು ಮತ್ತೆ ಖುದ್ದು ಮನವಿ ಸಲ್ಲಿಸಿದ್ದು; ಕೊಲೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ಇಡೀ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಬೇಡಿಕೆ ಇರಿಸಿರುವದಾಗಿ ಸ್ಪಷ್ಟಪಡಿಸಿದರು.

ಸಂಪಾಜೆಯಲ್ಲಿ ಕೊಲೆ ಆರೋಪಿಗಳ ಬಗ್ಗೆ ಸಮಗ್ರ ತನಿಖೆ ನಡೆಸಿ; ಕೊಲೆ ಹಿಂದಿರುವ ಅಕ್ರಮಗಳನ್ನು ಬಯಲಿಗೆ ಎಳೆಯುವಂತೆ ಬೇಡಿಕೆ ಸಲ್ಲಿಸಿದ್ದು; ತಮ್ಮ ಕುಟುಂಬ ಆತಂಕದ ನಡುವೆ ಬದುಕುವಂತಾಗಿದೆ ಎಂದು ಅಳಲು ತೋಡಿಕೊಂಡರು.