ಕುಶಾಲನಗರ, ಮಾ. 20: ಕುಶಾಲನಗರ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ವಿದೇಶಗಳಿಂದ ಆಗಮಿಸಿದ ವ್ಯಕ್ತಿಗಳ ಬಗ್ಗೆ ನಾಗರಿಕರು ಸುಳಿವು ನೀಡಿದ ಹಿನ್ನೆಲೆಯಲ್ಲಿ ಕುಶಾಲನಗರ, ಮುಳ್ಳುಸೋಗೆ, ಗೊಂದಿಬಸವನಹಳ್ಳಿ, ಕೂಡಿಗೆ ವ್ಯಾಪ್ತಿಯಲ್ಲಿ 5 ಮಂದಿಯನ್ನು ಪೊಲೀಸರು ಮನೆಯಲ್ಲೇ ಇರುವಂತೆ ಸೂಚಿಸಿದ್ದಾರೆ.

ಕುಶಾಲನಗರದ ವಿವೇಕಾನಂದ ಬಡಾವಣೆ ಮತ್ತಿತರ ಸ್ಥಳಗಳಲ್ಲಿ ವಿದೇಶಗಳಿಂದ ಆಗಮಿಸಿದರೂ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡದೆ ಇರುವ ಜನರ ಮೇಲೆ ಗುಮಾನಿ ಸ್ಥಳೀಯರಿಗೆ ಬಂದ ಹಿನ್ನೆಲೆಯಲ್ಲಿ ಐವರನ್ನು ಗೃಹಬಂಧನದಲ್ಲಿ ಇರುವಂತೆ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಕುಶಾಲನಗರದಲ್ಲಿ ಜನರ ಓಡಾಟ ಬಹುತೇಕ ವಿರಳವಾಗಿದ್ದು ಸಾರಿಗೆ ಬಸ್‍ಗಳಲ್ಲಿ ಜನರ ಸಂಖ್ಯೆ ಕ್ಷೀಣವಾಗಿತ್ತು. ಬಸ್ ನಿಲ್ದಾಣ, ರಸ್ತೆಗಳು ಬಿಕೋ ಅನ್ನುತ್ತಿದ್ದವು.

ಕುಶಾಲನಗರ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣ ಪಂಚಾಯ್ತಿ ಮೂಲಕ ಸಮುದಾಯ ಭವನ, ಛತ್ರಗಳು, ಲಾಡ್ಜ್Uಳನ್ನು ಬಂದ್ ಮಾಡುವಂತೆ ನೋಟೀಸ್ ನೀಡಲಾಗಿದೆ ಎಂದು ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್ ತಿಳಿಸಿದ್ದಾರೆ.

ಪಟ್ಟಣದ ಬಹುತೇಕ ವ್ಯಾಪಾರ ವಹಿವಾಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆದಂತೆ ಕಂಡುಬಂದಿದೆ. ಆದರೂ ಕೆಲವು ವ್ಯಕ್ತಿಗಳು ಸೂಚನೆ ಮೀರಿ ವಹಿವಾಟು ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕುಶಾಲನಗರ ಪಟ್ಟಣದ ರೈತ ಸಹಕಾರ ಭವನದಲ್ಲಿ ವಿವಾಹ ಕಾರ್ಯಕ್ರಮವೊಂದು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪ.ಪಂ. ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದರೂ ಯಾವುದೇ ರೀತಿಯ ಕ್ರಮಕೈಗೊಳ್ಳಲು ಅಸಹಾಯಕತೆ ತೋರಬೇಕಾಯಿತು. ಸೋಮವಾರಪೇಟೆ ತಾಲೂಕು ಕಛೇರಿಯ ಅಧಿಕಾರಿಯೊಬ್ಬರ ಪುತ್ರಿಯ ಮದುವೆ ಸಮಾರಂಭದಲ್ಲಿ ಗುರುವಾರ ರಾತ್ರಿ 800 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು ಎಂದು ಸ್ಥಳೀಯರು ದೂರಿದ್ದು ಇದರಲ್ಲಿ ಜಿಲ್ಲೆಯ ಬಹುತೇಕ ಸರಕಾರಿ ಅಧಿಕಾರಿ, ಸಿಬ್ಬಂದಿಗಳು ಇದ್ದರು ಎನ್ನಲಾಗಿದೆ.

ಜಿಲ್ಲಾಧಿಕಾರಿಗಳ ಸೂಚನೆಯನ್ನು ಪಾಲಿಸದೆ ಅದ್ಧೂರಿ ಮದುವೆ ಏರ್ಪಡಿಸಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಗೋಚರಿಸಿತು.

ಮದುವೆ ಕಾರ್ಯಕ್ರಮದ ಕಲ್ಯಾಣ ಮಂಟಪದ ಮಾಲೀಕರಿಗೆ ನೋಟೀಸ್ ನೀಡಿರುವುದಾಗಿ ಸುಜಯ್‍ಕುಮಾರ್ ತಿಳಿಸಿದ್ದಾರೆ.