ನಾಪೋಕ್ಲು, ಮಾ. 20: ಕೊಡಗಿನಲ್ಲಿ ಮೊದಲ ಕೊರೊನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ, ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸೋಂಕಿತ ವ್ಯಕ್ತಿಯು ಭೇಟಿ ಮಾಡಿರುವ ಕಕ್ಕಬ್ಬೆ ಕುಂಜಿಲ ಗ್ರಾಮದಲ್ಲಿನ ಸೋದರಿಯ ಮನೆ, ಪೈನರಿ ಮಸೀದಿ ಮತ್ತು ಇತರ ಬಂಧುಗಳ ಮನೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಪ್ರಬಾರ ಕಂದಾಯ ಅಧಿಕಾರಿ ಶಿವಕುಮಾರ್, ಗ್ರಾಮ ಪಂಚಾಯ್ತ ಪಿಡಿಓ ಸಚಿನ್, ಪಂಚಾಯ್ತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಗ್ರಾಮ ಲೆಕ್ಕಿಗ ಜನಾರ್ದನ್, ಚೆಯ್ಯಂಡಾಣೆಯ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರು ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವ್ಯಾಪಕ ಪರಿಶೀಲನೆ ನಡೆಸಿ, ಸಂಬಂಧಿಸಿದ ವರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ಯಾವುದೇ ಕಾರಣಕ್ಕು ಮುಂದಿನ 14 ದಿನಗಳ ಕಾಲ ಮನೆಯಿಂದ ಹೊರಬಾರದಂತೆ, ಯಾವುದೇ ಅನಾರೋಗ್ಯ ಲಕ್ಷಣಗಳು ಕಂಡುಬಂದರೂ ಕೂಡಲೇ ವೈದ್ಯರನ್ನು ಭೇಟಿಯಾಗುವಂತೆ ತಿಳಿಹೇಳಲಾಗಿದೆ.
ಇತ್ತ ನಾಪೋಕ್ಲು ವ್ಯಾಪ್ತಿಯಲ್ಲೂ ಕೊರೊನಾ ಎಚ್ಚರಿಕೆ ನೀಡಲಾಗುತ್ತಿದೆ. ಗ್ರಾಮ ಪಂಚಾಯ್ತಿಯು ಧ್ವನಿವರ್ಧಕದ ಮೂಲಕ ಜನ ಜಾಗೃತಿಗೆ ಮುಂದಾಗಿದೆ. ಚೆಯ್ಯಂಡಾಣೆ ಸಮೀಪದ ಕಿಕ್ಕರೆ, ಕಡಂಗ, ಎಡಪಾಲಗಳಲ್ಲಿ ವಿದೇಶ ಪ್ರಯಾಣ ಮುಗಿಸಿ ಬಂದ ಹಲವರು ರಾಜಾರೋಷವಾಗಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಈ ಬಗ್ಗೆ ವಿಚಾರಿಸಿದರೆ, ತಮ್ಮನ್ನು ಕೇರಳದಲ್ಲೇ ಪರೀಕ್ಷಿಸಲಾಗಿದೆ ಎಂಬ ಸಬೂಬು ನೀಡುತ್ತಿದ್ದಾರೆ ಎಂದು ನಾಗರಿಕರು ಮಾಧ್ಯಮದ ಗಮನಕ್ಕೆ ತಂದಿದ್ದಾರೆ.
-ವರದಿ : ದುಗ್ಗಳ ಸದಾನಂದ