ಗೋಣಿಕೊಪ್ಪಲು, ಮಾ. 20: ಗೋಣಿಕೊಪ್ಪಲುವಿನಲ್ಲಿ ಗುತ್ತಿಗೆದಾರ ನೋರ್ವನ ನಿರ್ಲಕ್ಷ್ಯದಿಂದಾಗಿ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಸ್ತೆಗೆ ಸಂಚಕಾರ ಬಂದೊದಗಿದೆ. ಕಾಂಕ್ರಿಟ್ ರಸ್ತೆಯ ಒಂದು ಭಾಗದ ಬದಿಯಲ್ಲಿ ಜೆಸಿಬಿ ಕೆಲಸ ನಿರ್ವಹಿಸುವ ಸಂದರ್ಭ ಸಾಕಷ್ಟು ಹಾನಿಯಾಗಿದೆ. ಈ ಬಗ್ಗೆ ಗ್ರಾ.ಪಂ. ಮೌನ ವಹಿಸಿದೆ.

ಮಾರ್ಚ್ ತಿಂಗಳ ಅಂತ್ಯದಲ್ಲಿ ಕೆಲಸ ಮುಗಿಸಿ ಬಿಲ್ ಪಡೆಯುವ ದಾವಂತದಲ್ಲಿ ಗುತ್ತಿಗೆದಾರ ಸುಮಾರು 200 ಮೀಟರ್ ಕಾಂಕ್ರಿಟ್ ರಸ್ತೆ ಬದಿಯನ್ನು ಜೆಸಿಬಿಯಿಂದ ಅಗೆಯುವ ಸಂದರ್ಭ ರಸ್ತೆಯು ತನ್ನ ಗುಣಮಟ್ಟ ವನ್ನು ಕಳೆದು ಕೊಳ್ಳುವಂತಾಗಿದೆ. ಕಾಮಗಾರಿಯ ಬಗ್ಗೆ ಪಂಚಾಯ್ತಿಯ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿ ಗಳಿಗಾಗಲಿ ಗಮನಕ್ಕೆ ತಾರದೆ ಕೆಲಸ ನಿರ್ವಹಿಸಿರುವುದೇ ಹಾಳಾಗಲು ಕಾರಣವಾಗಿದೆ.

ಪಟ್ಟಣದ ಬೈಪಾಸ್ ಮಾರ್ಗದಲ್ಲಿ ಕಳೆದ 10 ವರ್ಷಗಳ ಹಿಂದೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯನವರು ಸುಮಾರು ರೂ. 2 ಕೋಟಿ ಅನುದಾನವನ್ನು ವಿನಿಯೋಗಿಸಿ; ಅಗಲೀಕರಣಗೊಳಿಸಿ ಕಾಂಕ್ರಿಟ್ ರಸ್ತೆಯನ್ನಾಗಿ ಮಾಡಲಾಗಿತ್ತು. ಈ ಪ್ರದೇಶವು ಶೀತ ವಲಯವಾದ ಕಾರಣ 3 ಹಂತದಲ್ಲಿ ಕಾಂಕ್ರಿಟ್ ಅಳವಡಿಸಿ ಗುಣಮಟ್ಟದ ರಸ್ತೆಯನ್ನು ಮಾಡಲಾಗಿತ್ತು. ತದಾ ನಂತರ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ದಿನನಿತ್ಯ ಓಡಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಅವಶ್ಯವಿರುವ ಕಡೆಗೆ ಬೃಹತ್ ಪ್ರಮಾಣದ ಮೋರಿಗಳನ್ನು ನಿರ್ಮಾಣಗೊಳಿಸಿ ನೀರು ಹರಿಯಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ಭವಿಷ್ಯದ ಹಿತ ದೃಷ್ಟಿಯಿಂದ ಹಾಗೂ ಶೀತ ಪ್ರದೇಶವಾದ ಕಾರಣ ರಸ್ತೆಯು ಮಳೆಯಲ್ಲಿ ಜರುಗಿ ಹೋಗದಂತೆ 2 ಭಾಗದಲ್ಲಿಯೂ ತಲಾ 5 ಅಡಿಯಷ್ಟು ಜಲ್ಲಿ ಕಲ್ಲುಗಳನ್ನು ಹಾಕಿ ಭದ್ರಪಡಿಸಲಾಗಿತ್ತು. ಮುಂದೆ ಸಾರ್ವಜನಿಕರಿಗೆ, ಬಡಾವಣೆ ನಿವಾಸಿಗಳಿಗೆ ಅನುಕೂಲಕರವಾಗಲು ಮುಂದಾಲೋಚನೆ ವಹಿಸಿ 50 ಮೀ.ಗೆ 1ರಂತೆ ರಸ್ತೆಯ ಅಡಿ ಭಾಗದಲ್ಲಿ 1 ಅಡಿಯ ಪೈಪ್ ಲೈನ್‍ಅನ್ನು ಅಳವಡಿಸಿ ಸಂದರ್ಭಕ್ಕನುಗುಣವಾಗಿ ಈ ಪೈಪ್ ಲೈನ್‍ಅನ್ನು ಬಳಸಿಕೊಳ್ಳಲು ನುರಿತ ತಜ್ಞರು, ಇಂಜಿನಿಯರ್ ಈ ರೀತಿ ಅವಕಾಶ ಕಲ್ಪಿಸಿದ್ದರು. ಆದರೆ ಇದ್ಯಾವುದನ್ನು ಗಮನಿಸದ ಗುತ್ತಿಗೆದಾರ ರಸ್ತೆ ಬದಿಯ ಎರಡು ಅಡಿಗಳ ಅಂತರವನ್ನು ಜೆಸಿಬಿ ಮೂಲಕ ಅಗೆಸಿ ಪೈಪ್ ಲೈನ್‍ಅನ್ನು ಹೊಸದಾಗಿ ಹಾಕಿದ್ದಾರೆ. ಇದರಿಂದ ರಸ್ತೆಯ ಭಾಗವು ಸಂಪೂರ್ಣ ಹಾಳಾಗಿದೆ. ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಸ್ತೆಯಲ್ಲಿ ಇಂತಹ ಬೇಜವಾಬ್ದಾರಿವುಳ್ಳ ಪೈಪ್ ಲೈನ್ ಕೂಡ ಕಳಪೆ ಮಟ್ಟದಿಂದ ಕೂಡಿದ್ದು ಆತುರವಾಗಿ ಗುಂಡಿ ಮುಚ್ಚುವ ಪ್ರಯತ್ನ ನಡೆಯುತಿತ್ತು.