ಸೋಮವಾರಪೇಟೆ,ಮಾ.20: ಅಕ್ರಮವಾಗಿ ಶ್ರೀಗಂಧ ಮರ ಹಾಗೂ ಜಿಂಕೆ ಕೊಂಬುಗಳನ್ನು ಮಾರಾಟಕ್ಕೆಂದು ಶೇಖರಿಸಿಟ್ಟಿದ್ದ ಪ್ರಕರಣವನ್ನು ಸೋಮವಾರಪೇಟೆ ಅರಣ್ಯ ಇಲಾಖಾಧಿಕಾರಿಗಳ ತಂಡ ಪತ್ತೆ ಹಚ್ಚಿದ್ದು, ಕಾರ್ಯಾಚರಣೆ ಸಂದರ್ಭ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದ ಕಾಂತರಾಜ್ ಅಲಿಯಾಸ್ ಕಾಂತ ಎಂಬಾತ ಕಾಫಿ ತೋಟದಲ್ಲಿ ಅಕ್ರಮವಾಗಿ ಶ್ರೀಗಂಧದ ಕೊರಡುಗಳು ಮತ್ತು ಜಿಂಕೆ ಕೊಂಬನ್ನು ಅಡಗಿಸಿಟ್ಟಿದ್ದ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿಗಳ ತಂಡ ಧಾಳಿನಡೆಸಿದೆ.
ಈ ಸಂದರ್ಭ ಆರೋಪಿ ಪರಾರಿಯಾಗಿದ್ದು, ಸ್ಥಳದಲ್ಲಿದ್ದ ದ್ವಿಚಕ್ರ ವಾಹನ ಸೇರಿದಂತೆ, 17 ಕೆ.ಜಿ. ಶ್ರೀಗಂಧ ಹಾಗೂ 2 ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ. ಡಿ.ಆರ್.ಎಫ್.ಓ. ಪ್ರಭಾಕರನ್ ಮತ್ತು ಎ.ಸಿ.ಎಫ್. ನೆಹರು ಅವರುಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರ್.ಎಫ್.ಓ. ಶಮಾ, ಡಿ.ಆರ್.ಎಫ್.ಓ. ಜಗದೀಶ್, ಸತೀಶ್, ಮನು, ಚಂದ್ರೇಶ್, ಅರಣ್ಯ ರಕ್ಷಕ ವಿಶ್ವ, ಚೇತನ್, ಭರಮಪ್ಪ, ಚಾಲಕರಾದ ಮಣಿ, ನಂದೀಶ್, ಸಂದೀಪ್ ಅವರುಗಳು ಭಾಗವಹಿಸಿದ್ದರು.