ಕರಿಕೆ, ಮಾ. 18: ಇಡೀ ಜಗತ್ತನ್ನು ಬೆಚ್ಚಿಬೀಳಿಸಿರುವ ಮಾರಕ ಕೊರೊನಾ ವೈರಸ್ ಕೊಡಗಿಗೂ ಕಾಲಿಟ್ಟಿದ್ದು, ಕೇರಳ ಗಡಿಗ್ರಾಮ ಕರಿಕೆಯಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದೆ. ಕರಿಕೆ ಗ್ರಾಮವು ಕೇರಳ ರಾಜ್ಯಕ್ಕೆ ಹೊಂದಿಕೊಂಡಿದ್ದು; ಗ್ರಾಮ ಹಾಗೂ ಕೇರಳದ ಸಾಕಷ್ಟು ಮಂದಿ ಇಟಲಿ ಹಾಗೂ ಇತರ ಅರಬ್ ರಾಷ್ಟ್ರಗಳಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ಇದೀಗ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಾಯ್ನಾಡಿಗೆ ಮರಳುತ್ತಿದ್ದು ಇವರ ಬಗ್ಗೆ ಯಾವುದೇ ನಿಗಾ ವಹಿಸಿದಂತೆ ಕಾಣುತ್ತಿಲ್ಲ.ಆದರೆ ಕೊಡಗು ಜಿಲ್ಲಾಧಿಕಾರಿಗಳು ಕರಿಕೆ,ಕುಟ್ಟ,ಮಾಕುಟ್ಟ ಸೇರಿದಂತೆ ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಗ್ರಾಮದ ಚೆಕ್ ಪೋಸ್ಟ್‍ಗಳಲ್ಲಿ 24x7 ತಪಾಸಣಾ ಕೇಂದ್ರ ಆರಂಭಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಿ 17ರಂದು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ‘ಶಕ್ತಿ' ಇಂದು ಖುದ್ದಾಗಿ ಕರಿಕೆ, ಚೆಂಬೇರಿ ಅರಣ್ಯ ಚೆಕ್‍ಪೋಸ್ಟ್ ಬಳಿ ತೆರಳಿ ಪರಿಶೀಲಿಸಿದಾಗ ಬೆಳಿಗ್ಗೆ ಎಂಟರಿಂದ ಸಂಜೆ ಆರರ ತನಕ ಎರಡು ಪಾಳಿಯಲ್ಲಿ ತಲಾ ಇಬ್ಬರು ಆಶಾ ಕಾರ್ಯಕರ್ತೆಯರು ಹಾಗೂ ಒಬ್ಬರು ಶುಶ್ರೂಷಕಿಯನ್ನು ಕರ್ತವ್ಯ ನಿರ್ವಹಿಸುತ್ತಿದ್ದು, ಬಿರುಬಿಸಿಲಿನಲ್ಲಿ ವಾಹನವನ್ನು ತಡೆದು ಮಾಹಿತಿ ನೀಡುತ್ತಿರುವುದು ಕಂಡು ಬಂದಿತು. ಮೂವರು ಮಹಿಳಾ ಸಿಬ್ಬಂದಿಯವರಾಗಿದ್ದು, ಇವರ ರಕ್ಷಣೆಗೆ ಯಾವುದೇ ವ್ಯವಸ್ಥೆ ಅಲ್ಲಿ ಕಂಡು ಬಂದಂತಿಲ್ಲ. ಇವರಿಗೆ ಬಿಸಿಲಿನ ರಕ್ಷಣೆಗೆ ಯಾವುದೇ ತಾತ್ಕಾಲಿಕ ಶೆಡ್ ಆಗಲಿ ಊಟದ ವ್ಯವಸ್ಥೆಯಾಗಲಿ ಕಲ್ಪಿಸಿಲ್ಲ. ಬದಲಿಗೆ ಮರದ ನೆರಳಿನಲ್ಲಿ ಆಶ್ರಯ ಪಡೆದಿರುವುದು ಕಂಡು ಬಂತು. ಕೆಲವು ಮಾಸ್ಕ್ ಮತ್ತು ಕರಪತ್ರಗಳನ್ನು ಹೊರತುಪಡಿಸಿದರೆ ಬೇರಾವುದೇ ಆಧುನಿಕ ತಪಾಸಣೆ ಪರಿಕರಗಳು ಕೂಡ ಸರಬರಾಜು ಮಾಡಿರುವುದಿಲ್ಲ. ಇದೇ ಚೆಕ್ ಪೋಸ್ಟ್ ಬಳಿ ಹಕ್ಕಿಜ್ವರ ಹಿನ್ನೆಲೆಯಲ್ಲಿ ಕೋಳಿ ಹಾಗೂ ಮೊಟ್ಟೆ ವಾಹನ ತಪಾಸಣೆಯ ಬೃಹತ್ ಫಲಕ ಅಳವಡಿಸಿದ್ದು, ಯಾವುದೇ ಪಶುಪಾಲನೆ ಇಲಾಖೆಯ ಸಿಬ್ಬಂದಿಗಳು ತಪಾಸಣೆಯಲ್ಲಿ ತೊಡಗಿರುವುದು ಗೋಚರಿಸಿರುವುದಿಲ್ಲ. ನೆರೆಯ ಪನತಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಣತ್ತೂರು, ಬಳಂತೋಡು, ಮಾಲೆಕಲ್ಲು ಸೇರಿದಂತೆ ಇತರ ಗ್ರಾಮಗಳ ಸುಮಾರು ಎಂಬತ್ತಕ್ಕೂ ಅಧಿಕ ಮಂದಿ ಇಟಲಿ ಸೇರಿದಂತೆ ಇತರೆ ರಾಷ್ಟ್ರಗಳಿಂದ ತಾಯ್ನಾಡಿಗೆ ಮರಳುವ ಬಗ್ಗೆ ತಿಳಿದು ಬಂದಿದ್ದು, ಇವರ ಹೆಚ್ಚಿನ ಸಂಬಂಧಿಕರು ಕರಿಕೆಯಲ್ಲಿ ಕೂಡ ವಾಸವಾಗಿದ್ದಾರೆ. ಅಲ್ಲದೆ ಗಡಿ ಗ್ರಾಮದಲ್ಲಿ ಮೂರು ಬಾರ್ ಹಾಗೂ ರೆಸ್ಟೋರೆಂಟ್ ಹಾಗೂ ಒಂದು ಮದ್ಯದಂಗಡಿ ಕಾರ್ಯ ನಿರ್ವಹಿಸುತ್ತಿದ್ದು, ಕೇರಳಿಗರೇ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿಗೆ ಮದ್ಯ ಸವಿಯಲು ಆಗಮಿಸುತ್ತಿರುವ ಕಾರಣ ಇಲ್ಲೂ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ, ಈ ಬಗ್ಗೆ ಜಿಲ್ಲಾಡಳಿತ ಮುಂಜಾಗ್ರತೆ ವಹಿಸಬೇಕಾಗಿದೆ. ಪಕ್ಕದ ಪಾಣತ್ತೂರಿನಲ್ಲಿ ಆರೋಗ್ಯ ಇಲಾಖೆ ಸೂಕ್ತ ಮುಂಜಾಗ್ರತಾ ಕ್ರಮವಹಿಸಿದ್ದು ಪೊಲೀಸ್ ಇಲಾಖೆಯ ಸಹಕಾರದಿಂದ ಕರ್ನಾಟಕ ರಾಜ್ಯದಿಂದ ಕೇರಳಕ್ಕೆ ಪ್ರವೇಶ ಮಾಡುವ ಪ್ರತಿಯೊಂದು ವಾಹನವನ್ನು ತಪಾಸಣೆ ನಡೆಸಿ ವೀಡಿಯೋ ಚಿತ್ರೀಕರಣ ನಡೆಸುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ನಮ್ಮ ಆರೋಗ್ಯ ಇಲಾಖೆ ನೂರಾರು ಕರಪತ್ರಗಳನ್ನು ಮುದ್ರಿಸಿ ಇಬ್ಬರು ಆಶಾ ಕಾರ್ಯಕರ್ತೆ ಹಾಗೂ ಓರ್ವ ಶುಶ್ರೂಷಕಿಯನ್ನು ನೇಮಿಸಿ ಹಂಚುತ್ತಿರುವುದು ಇಲಾಖೆಯ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ. ಇದಲ್ಲದೆ ಆರೋಗ್ಯ ವಿಸ್ತರಣಾ ಕೇಂದ್ರದ ಶುಶ್ರೂಷಕಿ ಯನ್ನು ಚೆಕ್ ಪೋಸ್ಟ್ ಕರ್ತವ್ಯಕ್ಕೆ ನಿಯೋಜನೆ ಗೊಳಿಸಿರುವುದರಿಂದ ಓರ್ವ ಹಂಗಾಮಿ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುವ ಅನಿವಾರ್ಯ ಪರಿಸ್ಥಿತಿ ತಲೆದೋರಿದೆ. ಕಳೆದ ಒಂದುವಾರ ದಿಂದ ಮಾಸ್ಕ್ ಹಾಗೂ ಕೈ ಚೀಲಗಳ ಕೊರತೆಯ ಬಗ್ಗೆ ‘ಶಕ್ತಿ' ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಇದೀಗ ಸರಬರಾಜಾಗಿದೆ. ಕೂಡಲೇ ಕೊಡಗು ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮಕ್ಕೆ ಅಗತ್ಯ ತಪಾಸಣೆ ಸಲಕರಣೆಗಳು ಹಾಗೂ ಸಿಬ್ಬಂದಿಗಳನ್ನು ನೇಮಿಸಲು ಕ್ರಮ ವಹಿಸಬೇಕಾಗಿದೆ.
-ಹೊದ್ದೆಟ್ಟಿ ಸುಧೀರ್