ಮಡಿಕೇರಿ, ಮಾ. 20: ಕೊಡಗಿನ ಪೊನ್ನಂಪೇಟೆ ಅರಣ್ಯ ಕಾಲೇಜು ಸೇರಿದಂತೆ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ಹಾಗೂ ಶಿರಸಿ ಅರಣ್ಯ ಕಾಲೇಜಿನ ಮುಖ್ಯಸ್ಥರು ಕರ್ನಾಟಕ ಅರಣ್ಯ ಮಂತ್ರಿಗಳಿಗೆ ಅರಣ್ಯ ಇಲಾಖೆಗೆ ನೇಮಕಾತಿಯಲ್ಲಿ ಮೀಸಲಾತಿ ತಿದ್ದುಪಡಿಯ ವಿರುದ್ಧ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಅಲ್ಲದೆ, ಇತ್ತೀಚೆಗೆ ಈ ಮೀಸಲಾತಿ ಕಡಿತದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದ ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಅಂತರ್ರಾಷ್ಟ್ರೀಯ ಅರಣ್ಯ ದಿನವಾದ ತಾ. 21ರಂದು (ಇಂದು) ವಿಭಿನ್ನ ರೀತಿಯ ಆಂದೋಲನವನ್ನು ಪ್ರಾರಂಭಿಸಿ ಈ ಮೀಸಲಾತಿ ಕಡಿತವನ್ನು ವಿರೋಧಿಸಲಿದ್ದಾರೆ. ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರ ಬಿಎಸ್ಸಿ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಅರಣ್ಯ ಇಲಾಖೆಯಲ್ಲಿದ್ದ ಮೀಸಲಾತಿಯನ್ನು ಶೇಕಡ 75 ರಿಂದ ಶೇಕಡ 50ಕ್ಕೆ ಕಡಿತಗೊಳಿಸಿದೆ. ಈ ನಿರ್ಣಯವನ್ನು ಮರುಪರಿಶೀಲಿಸಿ ಬಿಎಸ್ಸಿ ಅರಣ್ಯ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆಯಲ್ಲಿ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ರಾಜ್ಯ ಅರಣ್ಯ ಇಲಾಖೆಯ ಸಚಿವರಾದ ಆನಂದ್ ಸಿಂಗ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ. ಕುಶಾಲಪ್ಪ ದೃಢಪಡಿಸಿದ್ದಾರೆ.
ಅರಣ್ಯ ಇಲಾಖೆ ಹೊರತುಪಡಿಸಿ ಇತರ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ವೃತ್ತಿಪರ ಪದವೀಧರರಿಗೆ ರಾಜ್ಯದ ಆಯಾ ಇಲಾಖೆಗಳಲ್ಲಿ ಶೇ.100 ರಷ್ಟು ಮೀಸಲಾತಿ ಒದಗಿಸಲಾಗಿದೆ. 2003ರಲ್ಲಿ ಅರಣ್ಯ ಇಲಾಖೆಯಲ್ಲಿ ಆರ್.ಎಫ್.ಒ. ಹಾಗೂ ಎ.ಸಿ.ಎಫ್. ಹುದ್ದೆಗೆ ಶೇ. 50 ಮೀಸಲಾತಿಯನ್ನು ಅರಣ್ಯ ಪದವೀಧರರಿಗೆ ಒದಗಿಸಲಾಗಿತ್ತು. 2012ರಲ್ಲಿ ಈ ಮೀಸಲಾತಿಯನ್ನು 75% ಆರ್.ಎಫ್.ಒ. ಹುದ್ದೆಗೆ ಹಾಗೂ 50% ಡಿವೈಆರ್‍ಎಫ್‍ಒ ಹುದ್ದೆಗೆಂದು ಬದಲಿಸಲಾಯಿತು. ಆದರೆ, ಈಗ ಆರ್.ಎಫ್.ಒ ಹುದ್ದೆಗೆ ಇದ್ದ ಮೀಸಲಾತಿಯನ್ನು ಶೇ. 50ಕ್ಕೆ ಇಳಿಸಲಾಗಿದೆ. ಈ ನಿರ್ಧಾರವನ್ನು ಪುನಃ ಪರಿಶೀಲಿಸಿ, ಅರಣ್ಯ ಪದವೀಧರರಿಗೆ ಇಲಾಖೆಯಲ್ಲಿ ಮೀಸಲಾತಿಯನ್ನು ಏರಿಸಲು ಕೋರಿ ಮನವಿ ಪತ್ರವನ್ನು ಸಚಿವರಾದ ಆನಂದ್ ಸಿಂಗ್ ಅವರಿಗೆ ಸಲ್ಲಿಸಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳ ಹುದ್ದೆಗಳಿಗೆ ಬಿಎಸ್ಸಿ (ಅರಣ್ಯ) ಮೂಲಭೂತ ಅರ್ಹತೆ ಎಂದು ಗುರುತಿಸುವ ಅವಶ್ಯಕತೆಯಿದೆ. ಇದು ಅರಣ್ಯ ನಿರ್ವಹಣೆಯ ಸವಾಲಿನ ಅಗತ್ಯಗಳನ್ನು ಪೂರೈಸಲು ಸಹಕಾರಿಯಾಗುತ್ತದೆಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಈ ಮೀಸಲಾತಿ ಕಡಿತದ ವಿರುದ್ಧ ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಈ ಹಿಂದೆ ಪೊನ್ನಂಪೇಟೆಯಲ್ಲಿ ಪ್ರತಿಭಟಿಸಿದ್ದರು. ಈ ಪ್ರತಿಭಟನನೆಯ ವಿಭಿನ್ನ ಆಂದೋಲನವನ್ನು ವಿದ್ಯಾರ್ಥಿ ಸಂಘದ ಸುಮಾರು 450 ವಿದ್ಯಾರ್ಥಿಗಳು ತಾ. 21ರಿಂದ ಆರಂಭಿಸಲಿದ್ದಾರೆ.
ವಿದ್ಯಾರ್ಥಿಗಳು ಕೃಷಿಕರಲ್ಲಿ ತೆರಳಿ ಅರಣ್ಯ ಇಲಾಖೆಯ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗೆ ಸಂಬಂಧಪಟ್ಟ ಮಾಹಿತಿಯನ್ನು ಅಂದರೆ ಯಾವ ರೀತಿಯ ಸಸಿಗಳಿಗೆ ಅರಣ್ಯ ಇಲಾಖೆ ಸಹಾಯಧನ ನೀಡಬಹುದೆಂಬ ಮಾಹಿತಿಯನ್ನು ಕಲೆಹಾಕಿ ಇಲಾಖೆಗೆ ಒದಗಿಸಿ, ಅರಣ್ಯ ಕಾಲೇಜಿನ ವಿದ್ಯಾರ್ಥಿಗಳ ಅರ್ಹತೆಯನ್ನು ಬೊಟ್ಟುಮಾಡಿ ತೋರಿಸಲಿದ್ದಾರೆ. ಇದಲ್ಲದೆ, ರಾಜ್ಯ ಸರ್ಕಾರದ ಇತರ ಕೃಷಿಪರ ಯೋಜನೆಗಳ ಬಗ್ಗೆ ಕೃಷಿಕರಲ್ಲಿ ಜಾಗೃತಿ ಮೂಡಿಸಿ, ಆಂದೋಲನಕ್ಕೆ ಹೊಸ ರೂಪ ನೀಡಲಿದ್ದಾರೆ.