ಮಡಿಕೇರಿ, ಮಾ.20: ಮಡಿಕೇರಿ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದಿದ್ದರೂ, ಪೂರ್ಣಗೊಂಡಿದೆ ಎಂದು ‘ಕಾಮಗಾರಿ ನಿರ್ವಹಣಾ ಪ್ರಮಾಣ ಪತ್ರ’ವನ್ನು ನೀಡಲಾಗಿದೆ ಎಂದು ಆರೋಪಿಸಿರುವ ಕಾವೇರಿಸೇನೆ ಸಂಘಟನೆ, ಇದೇ ಕಾಮಗಾರಿಗೆ ಮರು ಟೆಂಡರ್ ಪ್ರಕ್ರಿಯೆ ನಡೆಸಿ ನಿರ್ಮಾಣ ಕಾರ್ಯವನ್ನು ಅಪೂರ್ಣ ಗೊಳಿಸಿರುವ ಗುತ್ತಿಗೆ ದಾರನಿಗೆ ಕಾಮಗಾರಿ ನೀಡಿದರೆ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಲ್ಲದೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿಸೇನೆ ಸಂಚಾಲಕ ಕೆ.ಎ.ರವಿಚಂಗಪ್ಪ ಅವರು, ತಡೆಗೋಡೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸದೆ ಇದೀಗ ಮತ್ತೆ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅದೇ ಕಾಮಗಾರಿಯನ್ನು ಪಡೆಯಲು ಗುತ್ತಿಗೆದಾರರು ಪ್ರಯತ್ನಿಸುತ್ತಿದ್ದು, ಜಿಲ್ಲಾಧಿಕಾರಿಗಳು ಇದಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.

2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮಡಿಕೇರಿ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಹಿಂಭಾಗದ ಬೃಹತ್ ಬರೆ ಕುಸಿದು ಬಿದ್ದಿತ್ತು. ನಂತರದ ದಿನಗಳಲ್ಲಿ ತಡೆಗೋಡೆ ಕಾಮಗಾರಿಯನ್ನು ಆರಂಭಿಸಲಾಯಿತಾದರೂ ಇಲ್ಲಿಯವರೆಗೆ ಯೋಜನೆ ಪೂರ್ಣಗೊಂಡಿಲ್ಲ. ಆದರೆ 2019-20ನೇ ಸಾಲಿನಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ನಗರಸಭೆ ಕಾಮಗಾರಿ ನಿರ್ವಹಣಾ ಪತ್ರವನ್ನು ನೀಡಿರುವುದಾಗಿ ಆರೋಪಿಸಿದರು.

ಬಹುಕೋಟಿಯ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ದಂತೆ ನಗರಸಭೆ ನೀಡಿರುವ ಪ್ರಮಾಣ ಪತ್ರದಲ್ಲಿ ಯೋಜನೆ ಮೊತ್ತ 1,57,92,839 ರೂ. ಎಂದು ನಮೂದಿಸಲಾಗಿದೆ. ಆದರೆ, ಪೂರ್ಣವಾಗದ ಕಾಮಗಾರಿಗೆ ನಿರ್ವಹಣಾ ಪತ್ರವನ್ನು ನೀಡಿರುವುದನ್ನು ಗಮನಿಸಿದರೆ ಹಲವು ಸಂಶಯಗಳು ಮೂಡುತ್ತಿದೆ ಎಂದರು.

ನಿಯಮ ಉಲ್ಲಂಘನೆ

ದೊಡ್ಡ ಮಟ್ಟದ ಕಾಮಗಾರಿ ಗುತ್ತಿಗೆಯ ಐಡಿ 99468 ಮತ್ತು 98678 ಟೆಂಡರ್‍ಗಳಿಗೆ ಸಂಬಂಧಿಸಿ ದಂತೆ ಚಾರ್ಟರ್ಡ್ ಅಕೌಂಟೆಂಟ್ ರಿಂದ ಸಲ್ಲಿಸಲಾದ ವಹಿವಾಟು ಪ್ರಮಾಣಪತ್ರವು ಯುಡಿಐಎನ್ ಸಂಖ್ಯೆ ಹೊಂದಿರ ಬೇಕು. ಆದರೆ, ಗುತ್ತಿಗೆದಾರ ನೀಡಿರುವ ಪ್ರಮಾಣ ಪತ್ರದಲ್ಲಿ ಯುಡಿಐಎನ್ ದಾಖಲೆಗಳನ್ನು ಹೊಂದಿರದೆ ಎಲ್ಲಾ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದು ರವಿಚಂಗಪ್ಪ ಆರೋಪಿಸಿದರು.

2018-19ರ ಆರ್ಥಿಕ ವರ್ಷದ ಆದಾಯದ ಹೇಳಿಕೆಯಲ್ಲಿ ವ್ಯವಹಾರ ಆದಾಯವನ್ನು ಸೆಕ್ಷನ್ 44 ಎಡಿ ಪ್ರಕಾರ ಲೆಕ್ಕಹಾಕಲಾಗಿದೆ. ವಹಿವಾಟು 2 ಕೋಟಿಗಿಂತ ಕಡಿಮೆ ಇದ್ದಲ್ಲಿ ಮಾತ್ರ 44 ಎಡಿ ಪ್ರಕಾರ ಲೆಕ್ಕಹಾಕಬೇಕಾಗಿದೆ. ಆದರೆ 6.24 ಕೋಟಿ ಲೆಕ್ಕ ತೋರಿಸಲಾಗಿದ್ದರೂ 44 ಎಡಿ ಪ್ರಕಾರವೇ ಲೆಕ್ಕ ಹಾಕಲಾಗಿದೆ. 6.24 ಕೋಟಿ ವಹಿವಾಟಿಗೆ ಅವರು ಐಟಿಆರ್ 4 ಇನ್ಕಾಮೆಟಾಕ್ಸ್ ರಿಟರ್ನ್ ಫಾರ್ಮ್ ಅನ್ನು ಸಲ್ಲಿಸಿರುವುದಾಗಿ ತಿಳಿಸಿದ್ದು, 2 ಕೋಟಿ ಒಳಗೆ ವ್ಯವಹಾರ ಇದ್ದರೆ ಮಾತ್ರ ಐಟಿಆರ್ 4 ಇನ್ಕಾಮೆಟಾಕ್ಸ್ ರಿಟರ್ನ್ ಫಾರ್ಮ್ ಸಲ್ಲಿಸಬಹುದಿದ್ದು, 6 ಕೋಟಿಗೆ ಐಟಿಆರ್ 3 ಇನ್ಕಾಮೆಟಾಕ್ಸ್ ರಿಟರ್ನ್ ಫಾರ್ಮ್ ಸಲ್ಲಿಸಬೇಕಾಗಿದೆ. ಆದರೆ, ಇದರಲ್ಲಿಯೂ ತಪ್ಪು ಮಾಹಿತಿ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಇದೀಗ ಕಾಮಗಾರಿಯ ಮರುಟೆಂಡರ್ ನ್ನು ಇದೇ ಗುತ್ತಿಗೆದಾರ ಪಡೆಯಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ರವಿಚಂಗಪ್ಪ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾವೇರಿಸೇನೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೊಸಬೀಡು ಶಶಿ, ನಿರ್ದೇಶಕರುಗಳಾದ ಟಿ.ಆರ್.ಕರುಣ್ ಕುಮಾರ್ ಹಾಗೂ ಶಿವಶಂಕರ್ ಭಟ್ ಉಪಸ್ಥಿತರಿದ್ದರು.