ಮಡಿಕೇರಿ, ಮಾ. 20: ವಿಶೇಷಚೇತನರು ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ರಚಿತವಾಗಿರುವ ವೈದ್ಯಕೀಯ ಪ್ರಾಧಿಕಾರದಿಂದ ಅರ್ಹ ವಿಶೇಷಚೇತನರಿಗೆ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ ಶೇ. 40 ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವವರಿಗೆ ಮಾತ್ರ ಇಂತಹ ಗುರುತಿನ ಚೀಟಿ ನೀಡಲಾಗುವುದು.
ವಿಶೇಷ ಮಕ್ಕಳಿಗಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಸತಿಯುತ ಹಾಗೂ ವಸತಿ ರಹಿತ ಶಾಲೆಗಳಿದ್ದು ಹಾಗೆಯೇ ಕೊಡಗು ಜಿಲ್ಲೆಯಲ್ಲಿ ನಾಲ್ಕು ವಿಶೇಷ ಶಾಲೆಗಳು ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಸರ್ಕಾರದ ಶಿಶು ಕೇಂದ್ರೀಕೃತ ಶೈಕ್ಷಣಿಕ ಯೋಜನೆಯಡಿ ತಾಲೂಕಿನ ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್, ಪಾಲಿಬೆಟ್ಟದಲ್ಲಿ ವಿಶೇಷಚೇತನ ಮಕ್ಕಳ ವಸತಿ ರಹಿತ ಎರಡು ಶಾಲೆಗಳು ರಾಜ್ಯ ಸರ್ಕಾರದ ಅನುದಾನದಡಿ ಕಾರ್ಯ ನಿರ್ವಹಿಸುತ್ತಿದೆ.
ಸೋಮವಾರಪೇಟೆಯಲ್ಲಿ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರ ಸುಂಟಿಕೊಪ್ಪ ಹಾಗೂ ವೀರಾಜಪೇಟೆ ತಾಲೂಕಿನ ಶ್ರವಣದೋಶವುಳ್ಳ ಮಕ್ಕಳಿಗಾಗಿ ದೇವಪುರ ತಿತಿಮತಿಯಲ್ಲಿ ಅಮೃತವಾಣಿ ಶ್ರವಣ ದೋಷವುಳ್ಳ ಮಕ್ಕಳ ವಸತಿಯುತ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ವಿಶೇಷಚೇತನ ಅಧಿಕಾರಿ ಸಂಪತ್‍ಕುಮಾರ್ ಮಾಹಿತಿ ನೀಡಿದ್ದಾರೆ.
ವಿಶೇಷಚೇತನ ವಿದ್ಯಾರ್ಥಿಗಳಿಗೆ ಶೇ. 40 ಕ್ಕಿಂತ ಹೆಚ್ಚಿನ ಅಂಗವಿಕಲತೆಯುಳ್ಳ 1ನೇ ತರಗತಿಯಿಂದ ಉನ್ನತ ವ್ಯಾಸಾಂಗ ಮಾಡುವ ವಿಶೇಷಚೇತನ ವಿದ್ಯಾರ್ಥಿ/ ವಿದ್ಯಾರ್ಥಿನಿಯರುಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನವನ್ನು ತರಗತಿಗೆ ಅನುಗುಣವಾಗಿ ಮಂಜೂರು ಮಾಡಲಾಗುತ್ತಿದೆ. ಎಸ್‍ಎಸ್‍ಎಲ್‍ಸಿ ಮತ್ತು ಮೇಲ್ಪಟ್ಟ ಪಬ್ಲಿಕ್ ಪರೀಕ್ಷೆಗಳಲ್ಲಿ ಶೇ. 60 ಕ್ಕಿಂತ ಹೆಚ್ಚಿನ ಅಂಕಗಳಿಸಿದ ಪ್ರತಿಭಾನ್ವಿತ ವಿಶೇಷಚೇತನ ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಅರ್ಜಿಗಳನ್ನು ಇಲಾಖೆಯಿಂದ ಪಡೆಯಬಹುದಾಗಿದೆ.
ವಿಶೇಷಚೇತನರಿಗೆ ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಶುಲ್ಕ ಮರುಪಾವತಿಸುವ ಯೋಜನೆ
ಉನ್ನತ ಶಿಕ್ಷಣ ಪಡೆಯುವ ವಿಶೇಷಚೇತನರಿಗೆ 2013-14ನೇ ಸಾಲಿನಿಂದ ಎಸ್‍ಎಸ್‍ಎಲ್‍ಸಿ ನಂತರ ಉನ್ನತ ಶಿಕ್ಷಣ, ಸ್ನಾತಕೋತ್ತರ ಮತ್ತು ಔದ್ಯೋಗಿಕ ಶಿಕ್ಷಣಗಳಿಗೆ ನಿಯಮಾನುಸಾರ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸರ್ಕಾರವು ನಿಗದಿಪಡಿಸಿರುವ ಪರೀಕ್ಷಾ ಶುಲ್ಕ, ಬೋಧನಾ ಶುಲ್ಕ, ಪ್ರಯೋಗಾಲಯ ಶುಲ್ಕ, ಕ್ರೀಡಾ ಶುಲ್ಕ ಹಾಗೂ ಗ್ರಂಥಾಲಯ ಶುಲ್ಕಗಳನ್ನು ಮರುಪಾವತಿಸುವ ಯೋಜನೆ.
ಸ್ಪರ್ಧಾ ಚೇತನ
ವಿಶೇಷ ಸಾಮಥ್ರ್ಯವುಳ್ಳ ಹಾಗೂ ಭಿನ್ನ ಸಾಮಥ್ರ್ಯದ ವಿದ್ಯಾವಂತ ನಿರುದ್ಯೋಗಿ ಅಂಗವಿಕಲ ವ್ಯಕ್ತಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದು. ನಿರುದ್ಯೋಗ ವಿಶೇಷಚೇತನರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸಂಸ್ಥೆಗಳಿಗೆ ಹಣ ನೀಡಲಾಗುವುದು.
ಸಾಧನ ಸಲಕರಣೆ ಪೂರೈಕೆ
ವಿಶೇಷಚೇತನ ವ್ಯಕ್ತಿಗಳಿಗೆ ಅಗತ್ಯವಾದ ತ್ರಿಚಕ್ರವಾಹನ, ಶ್ರವಣ ಸಾಧನ, ಗಾಲಿ ಕುರ್ಚಿ, ಕೃತಕ ಅಂಗಾಂಗಗಳು, ಅಂಧರಿಗೆ ಬಿಳಿ ಕೋಲುಗಳು, ಕಪ್ಪು ಕನ್ನಡಕಗಳು, ಬ್ರೈಲ್ ವಾಚ್‍ಗಳು ಮತ್ತಿತರವನ್ನು ವೈದ್ಯಕೀಯ ಸಲಹೆಯಂತೆ ಉಚಿತವಾಗಿ ನೀಡುವುದು, ರಾಜ್ಯದಲ್ಲ್ಲಿ 10 ವರ್ಷಗಳಿಂದ ವಾಸವಿರುವ ಬಗ್ಗೆ ದೃಢೀಕರಣ ಪತ್ರ ಆದಾಯ ದೃಢೀಕರಣ ಪತ್ರ-ನಗರ 24 ಸಾವಿರ, ಗ್ರಾಮೀಣ-11,500 ಹಾಗೂ ಬಿಪಿಎಲ್ ಪಡಿತರ ಚೀಟಿ ಲಗತ್ತಿಸಿ ಅರ್ಜಿ ಸಲ್ಲಿಸುವುದು.
ವೈದ್ಯಕೀಯ ಪರಿಹಾರ ನಿಧಿ ಯೋಜನೆಯಡಿ ಅಂಗವಿಕಲತೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲು ಜಿಲ್ಲಾಮಟ್ಟದ ಸುಸಜ್ಜಿತ ಖಾಸಗಿ ಆಸ್ಪತ್ರೆ ಹಾಗೂ ಸಂಜಯಗಾಂಧಿ ಆಸ್ಪತ್ರೆ, ಬೆಂಗಳೂರು ಇಲ್ಲಿ ಚಿಕಿತ್ಸೆ ಪಡೆದವರಿಗೆ ಶಸ್ತ್ರ ಚಿಕಿತ್ಸೆ ಮಾಡಿದ ಹಣದ ಮೊತ್ತ ಅಥವಾ ಗರಿಷ್ಠ 1 ಲಕ್ಷದವರೆಗೆ ಧನ ಸಹಾಯದ ಸೌಲಭ್ಯ ನೀಡಲಾಗುತ್ತದೆ.
ಆರೋಗ್ಯ ವಿಮೆ ಯೋಜನೆ
ಕೇಂದ್ರ ಸರ್ಕಾರದ ನ್ಯಾಷ್‍ನಲ್ ಟ್ರಸ್ಟ್ -1999 ಆಕ್ಟ್ ಅಡಿ 04 ಬಗೆಯ ವಿಶೇಷಚೇತನರಿಗೆ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಸದರಿ ಯೋಜನೆಯನ್ವಯ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ 04 ಬಗೆಯ ವಿಶೇಷಚೇತನ ವ್ಯಕ್ತಿಗಳಿಗೆ ಪ್ರಥಮ ಬಾರಿ ಒಂದು ಸಲ ವಾರ್ಷಿಕ ರೂ. 250 ಗಳನ್ನು ಸರ್ಕಾರದ ವತಿಯಿಂದ ವಿಮಾ ಕಂತಾಗಿ ಪಾವತಿಸಿದಲ್ಲಿ ಪ್ರತಿ ವರ್ಷ ರೂ. 1 ಲಕ್ಷದವರಗೆ ವೈದ್ಯಕೀಯ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾ ಪುನರ್ವಸತಿ ಕೇಂದ್ರ
ವಿವಿಧ ಅಂಗವಿಕಲತೆಯುಳ್ಳ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸಾಧನ ಸಲಕರಣೆಗಳು, ಕೃತಕ ಅಂಗಾಗಗಳು, ಗುರುತಿನ ಚೀಟಿ, ಮಾಸಾಶನ, ಸ್ವಯಂ ಉದ್ಯೋಗ ಯೋಜನೆಯಡಿ ಸಹಾಯ ಮಾಡಲು ಅನುಕೂಲವಾಗುವಂತೆ ರಾಜ್ಯ ಸರ್ಕಾರದ ನೆರವಿನಿಂದ ಜಿಲ್ಲೆಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಬಸ್ ಪಾಸು-ರೈಲ್ವೆ ಪಾಸ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಸಲು ಅಂಧರಿಗೆ ಉಚಿತವಾಗಿ ಹಾಗೂ ಇತರ ವಿಶೇಷಚೇತನರಿಗೆ ಬಸ್‍ಗಳಲ್ಲಿ ರಿಯಾಯಿತಿ ದರದಲ್ಲಿ ಪಾಸ್‍ಗಳನ್ನು ವಿತರಿಸಲಾಗುವುದು. ಹಾಗೆಯೇ ರೈಲ್ವೆ ಇಲಾಖೆಯು ರೈಲುಗಳಲ್ಲಿ ಪ್ರಯಾಣಿಸುವ ವಿಶೇಷಚೇತನರಿಗೆ ಉಚಿತ ಪಾಸ್ ಹಾಗೂ ಅವರ ಬೆಂಗಾವಲಿನವರಿಗೆ ರಿಯಾಯಿತಿ ದರದ ಟಿಕೆಟ್ ಸೌಲಭ್ಯ ಪಡೆಯಬಹುದಾಗಿದೆ.