ಕೂಡಿಗೆ, ಮಾ. 19: ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕುಶಾಲನಗರ ಸಮೀಪದ ರಾಮಸ್ವಾಮಿ ಕಣಿವೆಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮಲಿಂಗೇಶ್ವರನನ್ನು ಮಣ್ಣಿನಿಂದ ನಿರ್ಮಿಸಿ ಪ್ರತಿಷ್ಠಾಪಿಸಿರುವ ಸನ್ನಿವೇಶವು ರಾಮಾಯಣದ ಸೀತಾಪಹರಣ ಕಥೆಯಲ್ಲಿ ಬರುತ್ತದೆ ಈ ಮೂಲಕ ರಾಮಾಯಣಕ್ಕೂ ಕಣಿವೆಯ ನದಿ ದಂಡೆಗೂ ಇರುವ ಸಂಬಂಧವನ್ನು ಇಲ್ಲಿ ಎತ್ತಿ ತೋರಿಸುತ್ತಿದೆ ಈ ಪುಣ್ಯಕ್ಷೇತ್ರ.

ಶ್ರೀ ರಾಮನು ಲಕ್ಷಣನೊಂದಿಗೆ ಸೀತೆಯನ್ನು ದಕ್ಷಿಣಾಭಿಮುಖವಾಗಿ ಹುಡುಕುತ್ತಾ ಬರುವ ಸಂದರ್ಭ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಕಂಡು ಇಲ್ಲಿಯೇ ವಿಶ್ರಾಂತಿ ಪಡೆಯಲು ಮುಂದಾಗುತ್ತಾನೆ ಎನ್ನಲಾಗಿದೆ.

ಇಲ್ಲಿನ ಕಾವೇರಿ ನದಿ ದಡದಲ್ಲಿ ಈ ಮೊದಲೇ ತಪಸ್ಸಿಗೆ ಕುಳಿತಿದ್ದ ವ್ಯಾಘ್ರ ಮಹರ್ಷಿಗಳು ಶ್ರೀ ರಾಮನಿಗೆ ಆಜ್ಞೆ ಮಾಡಿ ತನ್ನ ಪೂಜಾ ಕೈಂಕರ್ಯಗಳಿಗೆ ಅವಶ್ಯವಿರುವ ಶಿವಲಿಂಗವನ್ನು ತರಲು ಹೇಳುತ್ತಾರೆ. ಈ ಸಂದರ್ಭ ರಾಮನಿಗೆ ವ್ಯಾಘ್ರ ಮಹರ್ಷಿಗಳು ನೀಡಿದ ಆದೇಶವನ್ನು ಪಾಲಿಸಲು ಆಂಜನೇಯನು ಕಾಶಿಗೆ ಶಿವಲಿಂಗ ತರಲು ತೆರಳುತ್ತಾನೆ. ಆದರೆ, ಶಿವಲಿಂಗ ತರಲು ಹೋದ ಆಂಜನೇಯ ಬರಲು ತಡವಾಗುವು ದರ ಸೂಚನೆಯರಿತ ರಾಮ ಪೂಜೆಯ ಸಮಯ ಮೀರುತ್ತಿರು ವುದನ್ನು ಅರಿತು ಸ್ಥಳದಲ್ಲಿಯೇ ಮರಳಿನಿಂದ ಶಿವಲಿಂಗವನ್ನು ತಯಾರಿಸಿ ಪೂಜೆ ಆರಂಭಿಸುತ್ತಾನೆ.

ಅಷ್ಟರಲ್ಲಿ ಆಂಜನೇಯ ಶಿವ ಲಿಂಗವನ್ನು ತರುತ್ತಾನೆ. ಮರಳಿನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆಯಲ್ಲಿ ನಿರತನಾದ ರಾಮ ದೇವರ ಮೇಲೆ ಆಂಜನೇಯ ಅಸಮಾಧಾನಗೊಳ್ಳುತ್ತಾನೆ. ಈ ನಡುವೆ ಆಂಜನೇಯನಿಗೆ ಬೇಸರ ಆಗಬಾರದು ಎಂಬ ಕಾರಣಕ್ಕೆ ಆಂಜನೇಯ ಕಾಶಿಯಿಂದ ತಂದ ಶಿವಲಿಂಗವನ್ನು ಶ್ರೀರಾಮ ಸನ್ನಿಯ ಹಿಂಬದಿಯಲ್ಲಿ ಲಕ್ಷ್ಮಣನ ಮೂಲಕ ಪ್ರತಿಷ್ಠಾಪಿಸುತ್ತಾನೆ. ಈ ಸ್ಥಳ ಇದೀಗ ಲಕ್ಷ್ಮಣೇಶ್ವರ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಹೀಗೆ ಜಿಲ್ಲೆಯಲ್ಲಿಯೇ ಅತಿ ಅಪರೂಪದ ಲಕ್ಷ್ಮಣೇಶ್ವರ ಕ್ಷೇತ್ರವನ್ನು ಹೊಂದಿರುವ ಪೂಜಾ ಕ್ಷೇತ್ರವಾಗಿ ಕಣಿವೆ ಗ್ರಾಮ ಪ್ರಸಿದ್ದಿ ಹೊಂದಿದೆ. ಹರಿಹರೇಶ್ವರ ಲಿಂಗವು ಸಹ ಇಲ್ಲಿ ಉದ್ಭವ ಮೂರ್ತಿಯಾಗಿ ಭಕ್ತರಿಂದ ಪೂಜಿಸಲ್ಪಡುತ್ತಿದೆ.

ಯುಗಾದಿ ಬಳಿಕ ನಡೆಯುವ ಶ್ರೀ ರಾಮಲಿಂಗೇಶ್ವರ ಬ್ರಹ್ಮ ರಥೋತ್ಸವದಂದು ಅಂಚೆಯ ಮೂಲಕ ಕಾಶಿಯಿಂದ ಗಂಗಾಜಲ ಬರುತ್ತದೆ. ಹೆಬ್ಬಾಲೆ ಅಂಚೆ ಕಛೇರಿಗೆ ಬರುವ ಗಂಗಾಜಲವನ್ನು ನಾದಸ್ವರ ಮಂಗಳವಾದ್ಯ ಹಾಗೂ ಪೂರ್ಣಕುಂಭಗಳೊಂದಿಗೆ ಕಣಿವೆ ಗ್ರಾಮಸ್ಥರು ದೇವಾಲಯ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು ಗ್ರಾಮಕ್ಕೆ ತಂದು ರಾಮಲಿಂಗೇಶ್ವರನಿಗೆ ಅಭಿಷೇಕಗೈದ ಬಳಿಕ ಅಲಂಕೃತ ರಥದಲ್ಲಿ ಉತ್ಸವ ಮೂರ್ತಿಯನ್ನು ಭಕ್ತರ ಜಯ ಘೋಷದೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು.

ಜಾತ್ರಾ ಮಹೋತ್ಸವವು ಏಪ್ರಿಲ್ 2 ರಿಂದ 5 ರವರೆಗೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- ನಾಗರಾಜಶೆಟ್ಟಿ