ಮಡಿಕೇರಿ, ಮಾ. 19: ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ವಿಧಾನಸಭೆಯಲ್ಲಿ ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳ ಸಂಖ್ಯೆ ಎಷ್ಟು ಎಂದು ಮುಜರಾಯಿ ಹಾಗೂ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಪ್ರಶ್ನಿಸಿದರು.

ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಯ 34.562 ಅಧಿಸೂಚಿತ ಸಂಸ್ಥೆಗಳಿವೆ ಎಂದರು. ಕಳೆದ ಮೂರು ವರ್ಷಗಳಿಂದ ಯಾವ ದೇವಸ್ಥಾನಕ್ಕೆ ಯಾವ ಮಾನದಂಡದ ಆಧಾರದಲ್ಲಿ ಎಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ. ಕ್ಷೇತ್ರವಾರು ವಿವರ ನೀಡುವಂತೆ ಶಾಸಕರಾದ ಅಪ್ಪಚ್ಚು ರಂಜನ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು ಕಳೆದ ಮೂರು ವರ್ಷಗಳಿಂದ ಇಲ್ಲಿಯವರೆಗೆ ರಾಜ್ಯದಲ್ಲಿರುವ ದೇವಸ್ಥಾನಗಳಿಗೆ, ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಒಟ್ಟು ರೂ. 20187.94 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ ಎಂದು ತಿಳಿಸಿದರು.

2017-18ನೇ ಸಾಲಿನಲ್ಲಿ ದುರಸ್ತಿ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗೆ ರೂ. 8291.90 ಲಕ್ಷ, 2018-19ನೇ ಸಾಲಿನಲ್ಲಿ ರೂ. 4229.57 ಲಕ್ಷ, 2019-20ನೇ ಸಾಲಿನಲ್ಲಿ ರೂ. 9528.40 ಲಕ್ಷಗಳನ್ನು ನೀಡಲಾಗಿದೆ. ಆರಾಧನಾ ಯೋಜನೆಗೆ 2017-18ನೇ ಸಾಲಿನಲ್ಲಿ ರೂ. 199.99 ಲಕ್ಷ, 2018-19ನೇ ಸಾಲಿನಲ್ಲಿ ರೂ. 952.00 ಲಕ್ಷ, 2019-20ನೇ ಸಾಲಿನಲ್ಲಿ ರೂ. 952.00 ಲಕ್ಷ ನೀಡಲಾಗಿದೆ. ಪರಿಶಿಷ್ಟ ಉಪ ಯೋಜನೆಗೆ 2017-18ನೇ ಸಾಲಿನಲ್ಲಿ ರೂ. 1908 ಲಕ್ಷ, 2018-19ನೇ ಸಾಲಿನಲ್ಲಿ ರೂ. 70 ಲಕ್ಷ, 2019-20ನೇ ಸಾಲಿನಲ್ಲಿ ರೂ. 1520 ಲಕ್ಷ ನೀಡಲಾಗಿದೆ ಎಂದು ತಿಳಿಸಿದರು. ಗಿರಿಜನ ಉಪಯೋಜನೆಗೆ 2017-18ನೇ ಸಾಲಿನಲ್ಲಿ ರೂ. 200 ಲಕ್ಷ, 2018-19ನೇ ಸಾಲಿನಲ್ಲಿ ರೂ. 228 ಲಕ್ಷ, 2019-20ನೇ ಸಾಲಿನಲ್ಲಿ ರೂ. 228.00 ಲಕ್ಷಗಳನ್ನು ನೀಡಲಾಗಿದೆ ಎಂದರು. ದುರಸ್ತಿ/ ಜೀರ್ಣೋದ್ಧಾರ ಅಭಿವೃದ್ಧಿ ಯೋಜನೆಯಡಿ ಮುಜರಾಯಿ ದೇವಸ್ಥಾನಗಳು, ಖಾಸಗಿ ದೇವಸ್ಥಾನಗಳು ಮತ್ತು ಮಠಗಳಿಗೆ ಕ್ರೋಢೀಕರಿಸಿ ಜಿಲ್ಲಾವಾರು ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಆರಾಧನ/ಪರಿಶಿಷ್ಟ ಜಾತಿ ಉಪಯೋಜನೆ/ ಗಿರಿಜನ ಉಪಯೋಜನೆ ಈ ಮೂರು ಯೋಜನೆಗಳಡಿಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಕ್ಕೆ ಸಮಾನವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿದ ವಿವರ ಈ ಕೆಳಗಿನಂತಿದೆ.

2017-18ನೇ ಸಾಲಿನಲ್ಲಿ ಆರಾಧನಾ ಯೋಜನೆಯಡಿ ರೂ. 0.89 ಲಕ್ಷ, 2018-19ನೇ ಸಾಲಿನಲ್ಲಿ ರೂ. 4.24 ಲಕ್ಷ, 2019-20ನೇ ಸಾಲಿನಲ್ಲಿ ರೂ. 4.24 ಲಕ್ಷ ನೀಡಲಾಗಿದೆ. ಪರಿಶಿಷ್ಟ ಜಾತಿ ಉಪಯೋಜನೆಯಡಿ 2017-18ನೇ ಸಾಲಿನಲ್ಲಿ ರೂ. 8.92 ಲಕ್ಷ, 2018-19ನೇ ಸಾಲಿನಲ್ಲಿ 3.38 ಲಕ್ಷ, 2019-20ನೇ ಸಾಲಿನಲ್ಲಿ ರೂ. 6.78 ಲಕ್ಷ ನೀಡಲಾಗಿದೆ. ಗಿರಿಜನ ಉಪಯೋಜನೆಯಡಿ 2017-18ನೇ ಸಾಲಿನಲ್ಲಿ ರೂ. 1.33 ಲಕ್ಷ, 2018-19ನೇ ಸಾಲಿನಲ್ಲಿ ರೂ 1.02 ಲಕ್ಷ, 2019-20ನೇ ಸಾಲಿನಲ್ಲಿ 1.01 ಲಕ್ಷ ನೀಡಲಾಗಿದೆ ಎಂದು ಸಚಿವರು ಉತ್ತರಿಸಿದರು. ಬಳಿಕ ಶಾಸಕ ಅಪ್ಪಚ್ಚು ರಂಜನ್ ಅವರು ಕೊಡಗು ಜಿಲ್ಲೆಯ ಗ್ರಾಮೀಣ ದೇವಸ್ಥಾನಗಳು ಶಿಥಿಲ ವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನಿಸಿದರು. ಸರ್ಕಾರದ ಗಮನಕ್ಕೆ ಬಂದಿರುತ್ತದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.