ಮಡಿಕೇರಿ, ಮಾ. 19: ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಂ ಇವರ ಸ್ಮರಣಾರ್ಥ ಸಾಮಾಜಿಕ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ಸಾಹಿಸಿ, ಶ್ರಮಿಸಿ, ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಏಪ್ರಿಲ್ 14 ರಂದು ಮತ್ತು 15 ರಂದು ರಾಜ್ಯಮಟ್ಟದ ಜನ್ಮ ದಿನಾಚರಣೆಯ ಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಯನ್ನು ಗರಿಷ್ಠ 10 ಜನರಿಗೆ ಮತ್ತು ಡಾ. ಬಾಬು ಜಗಜೀವನ್ ರಾಂ ಪ್ರಶಸ್ತಿಯನ್ನು ಗರಿಷ್ಠ 10 ಜನರಿಗೆ ಪ್ರಧಾನ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು, ತಾ. 21 ರೊಳಗೆ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ ಮಡಿಕೇರಿ ಇಲ್ಲಿಗೆ ದಾಖಲೆಗಳೊಂದಿಗೆ ಸಲ್ಲಿಸುವುದು. ಯಾವುದೇ ವ್ಯಕ್ತಿ ಒಂದು ಪ್ರಶಸ್ತಿಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು, ಅರ್ಜಿದಾರರ ವಯಸ್ಸು ಕನಿಷ್ಟ 35 ವರ್ಷಗಳಾಗಿರತಕ್ಕದ್ದು, ಯಾವುದೇ ವ್ಯಕ್ತಿಯನ್ನು ಒಂದು ಪ್ರಶಸ್ತಿಗೆ ಮಾತ್ರ ಆಯ್ಕೆ ಮಾಡತಕ್ಕದ್ದು, ಪ್ರಶಸ್ತಿಗೆ ಯಾವುದೇ ಜನಾಂಗದ ವ್ಯಕ್ತಿ ಅರ್ಜಿ ಸಲ್ಲಿಸಬಹುದು. ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರತಕ್ಕದಲ್ಲ, ರಾಜ್ಯಮಟ್ಟದಲ್ಲಿ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಅರ್ಹ ವ್ಯಕ್ತಿಗಳು ನೇರವಾಗಿ ಅರ್ಜಿಗಳನ್ನು ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಇವರಿಗೆ ಸಲ್ಲಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭಾರತಿ ತಿಳಿಸಿದ್ದಾರೆ.