ಮಡಿಕೇರಿ, ಮಾ. 19: ಮಡಿಕೇರಿಯಿಂದ ಸಂಪಾಜೆ ಕಡೆಗೆ ತೆರಳುತ್ತಿದ್ದ ಲಾರಿಯೊಂದು (ಟಿ.ಎನ್. 28 ಸಿ.4656) ಚಾಲಕನ ಹತೋಟಿ ತಪ್ಪಿ ಪ್ರಪಾತಕ್ಕೆ ಉರುಳಿರುವ ಪರಿಣಾಮ; ತಮಿಳುನಾಡುವಿನ ಈರೋಡ್ ನಿವಾಸಿ ಮಣಿ ದುರ್ಮರಣಕ್ಕೀಡಾಗಿದ್ದು; ಕ್ಲೀನರ್ ಸೋಕಪ್ಪನ್ ತೀವ್ರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ಬೆಳಗಿನ ಜಾವ ಸಂಭವಿಸಿದೆ.

ತಮಿಳುನಾಡುವಿನ ಈರೋಡ್ ನಿವಾಸಿ, ಷಣ್ಮುಗಂ ಯಾನೆ ವೆಟ್ರ್ರಿವೇಲ್ ಎಂಬವರಿಗೆ ಸೇರಿದ್ದೆನ್ನಲಾದ ಲಾರಿಯಲ್ಲಿ ಬಿಳಿ ಸಿಮೆಂಟ್ ಹಾಗೂ ಪೈಂಟ್ ಡಬ್ಬಗಳು ಇತ್ಯಾದಿ ತುಂಬಿಸಿಕೊಂಡು ಮಂಗಳೂರಿಗೆ ಕೊಂಡೊಯ್ಯಲಾಗುತ್ತಿದ್ದುದಾಗಿ ಗೊತ್ತಾಗಿದೆ. ಈ ಲಾರಿ ತಡರಾತ್ರಿ ಮಡಿಕೇರಿಗಾಗಿ ಹಾದು ಹೋಗಿದ್ದು; ಬೆಳಗಿನ ಜಾವ 4.30ರ ಸುಮಾರಿಗೆ ದೇವರಕೊಲ್ಲಿ ಮಾರ್ಗದಲ್ಲಿ ತಲಪುತ್ತಿದ್ದಂತೆ; ಹೆದ್ದಾರಿಯ ತಿರುವೊಂದರಲ್ಲಿ ರಸ್ತೆ ಬದಿ ದಿಣ್ಣೆಗೆ ಅಪ್ಪಳಿಸಿ ಸುಮಾರು ನೂರು ಅಡಿಯಷ್ಟು ಪ್ರಪಾತದಲ್ಲಿ ಉರುಳಿ ಬಿದ್ದಿದೆ.

ಪರಿಣಾಮ ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದು; ಕ್ಲೀನರ್ ಸೋಕಪ್ಪನ್ ತೀವ್ರ ಗಾಯಗೊಂಡು ಬೊಬ್ಬೆ ಹಾಕಿದ್ದಾನೆ. ಈ ವೇಳೆ ಅಕ್ಕಪಕ್ಕ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಪ್ರಪಾತಕ್ಕೆ ತೆರಳಲಾರದೆ; ಅಗ್ನಿ ಶಾಮಕ ದಳ ಹಾಗೂ ಸಂಪಾಜೆ ಉಪಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿರುವ ಉಭಯ ಇಲಾಖೆಗಳ ಸಿಬ್ಬಂದಿ ಹಗ್ಗದ ಸಹಾಯದಿಂದ ಅಲ್ಲಿನ ಯುವಕರ ನೆರವಿನೊಂದಿಗೆ; ಪ್ರಪಾತಕ್ಕೆ ಇಳಿದು ಮೃತ ಚಾಲಕ ಹಾಗೂ ಗಾಯಾಳುವನ್ನು ಜಿಲ್ಲಾ ವೈದ್ಯಕೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲದೆ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್, ವೃತ್ತ ನಿರೀಕ್ಷಕ ದಿವಾಕರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ. ಡಿವೈಎಸ್‍ಪಿ ಬಿ.ಪಿ. ದಿನೇಶ್ ಕುಮಾರ್ ಸ್ಥಳ ಮಹಜರು ನಡೆಸಿದ್ದಾರೆ. ಲಾರಿ ಮಾಲೀಕ ಈರೋಡ್‍ನ ಷಣ್ಮುಗಂ ಅವರಿಗೆ ಸಂದೇಶ ರವಾನಿಸಲಾಗಿದೆ.

ಈ ಅಪಘಾತದ ತೀವ್ರತೆಗೆ ಸಾಕ್ಷಿಯಾಗಿ ಮೂರು ವಿದ್ಯುತ್‍ಕಂಬಗಳು ತುಂಡು ತುಂಡಾಗಿ ತಂತಿಗಳು ನೆಲದಲ್ಲಿ ಹರಡಿಕೊಂಡಿದ್ದ ದೃಶ್ಯ ಎದುರಾಯಿತು. ಕೂಡಲೇ ಧಾವಿಸಿ ಬಂದ ಚೆಸ್ಕಾಂ ಸಿಬ್ಬಂದಿ ಬದಲಿ ಕಂಬಗಳೊಂದಿಗೆ ಹೊಸ ತಂತಿ ಸಂಪರ್ಕ ಕಲ್ಪಿಸಿ ಅಪರಾಹ್ನ ಹೊತ್ತಿಗೆ ಕಡಿತಗೊಂಡಿದ್ದ ವಿದ್ಯುತ್ ವ್ಯವಸ್ಥೆ ಸರಿಪಡಿಸುವಲ್ಲಿ ಯಶಸ್ವಿ ಯಾದರು. ದುರಂತಕ್ಕೀಡಾಗಿರುವ ಲಾರಿ ನಜ್ಜುಗುಜ್ಜಾಗಿ ಸಂಪೂರ್ಣ ಹಾನಿಗೊಂಡು ಬಿಡಿಭಾಗಗಳು ಒಂದೊಂದು ದಿಕ್ಕಿನಲ್ಲಿ ಚದುರಿ ಹೋಗಿರುವ ಚಿತ್ರಣ ಗೋಚರಿಸಿದೆ. ಅವಘಡಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

-ಚಿತ್ರ, ವರದಿ : ಟಿ.ಜಿ. ಸತೀಶ್