ಶನಿವಾರಸಂತೆ, ಮಾ. 19: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಾಪುರ ಗಡಿಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನ ನಿಧಿ ರೂ. 5 ಲಕ್ಷ ವೆಚ್ಚದ ಕೊಳವೆ ಬಾವಿ ಹಾಗೂ ಪ್ರಾದೇಶಿಕ ಅಭಿವೃದ್ಧಿ ಯೋಜನೆಯಡಿ ರೂ. 25 ಲಕ್ಷ ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಕಾರಣರಾದ ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಅವರ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚೆನ್ನಾಪುರ ಮೂಲಭೂತ ಸೌಕರ್ಯ ವಂಚಿತ ಅಭಿವೃದ್ಧಿ ಕಾಣದ ಗ್ರಾಮ ಕುಡಿಯುವ ನೀರಿಗೆ ತತ್ವಾರವಾಗಿದ್ದು; ಗ್ರಾಮಸ್ಥರು ಸೇದುವ ಬಾವಿಯ ನೀರನ್ನೇ ಉಪಯೋಗಿಸುತ್ತಿದ್ದರು. ಬೇಸಿಗೆಯಲ್ಲಿ ಬಾವಿ ನೀರು ಬತ್ತಿಹೋಗುತ್ತಿತ್ತು. ಕುಡಿಯುವ ನೀರು, ರಸ್ತೆ ಇತ್ಯಾದಿ ಹತ್ತು ಹಲವು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಕರವೇ ಪದಾಧಿಕಾರಿಗಳಲ್ಲಿ ತೋಡಿಕೊಂಡರು. ಸ್ಪಂದಿಸಿದ ಕರವೇ ಪದಾಧಿಕಾರಿಗಳು ಸಮಸ್ಯೆಗಳ ಕುರಿತು ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಅವರಿಗೆ ಮನವಿ ಮಾಡಿದರು.

ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿದ ಸರೋಜಮ್ಮ ಕಾರ್ಯಪ್ರವೃತ್ತರಾದರು; ಕೊರೆಯಿಸಿದ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ; ಮನೆ ಮನೆಗೆ ಪೈಪ್‍ಲೈನ್ ಮೂಲಕ ನೀರು ಸರಬರಾಜು ಮಾಡಲಾಗಿದೆ. ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ ಸರೋಜಮ್ಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ರಸ್ತೆ ಕೆಲಸವನ್ನು ಉತ್ತಮವಾಗಿ ಮಾಡುವಂತೆ ಗುತ್ತಿಗೆದಾರರಿಗೆ ಸಲಹೆ ನೀಡಿದರು. ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಿದ ಸರೋಜಮ್ಮ ಅವರಿಗೆ ಚೆನ್ನಾಪುರ ಗ್ರಾಮಸ್ಥರು ಹಾಗೂ ಕರವೇ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್ ಹಾಗೂ ಸುರೇಶ್ ಕೃತಜ್ಞತೆ ಸಲ್ಲಿಸಿದರು.