ಮಡಿಕೇರಿ, ಮಾ. 19 : ರಾಜ್ಯದಲ್ಲಿ ಕೊರೊನಾ ವೈರಸ್ ಹರಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಈಗಾಗಲೇ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಹಲವಾರು ನಿರ್ದೇಶನಗಳನ್ನು ನೀಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಅತೀ ಜಾಗರೂಕತೆ ಯಿಂದ ಮುಂಜಾಗ್ರತಾ ಕ್ರಮಗಳನ್ನು ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೈಗೊಳ್ಳಬೇಕಿರುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಆ ನಿಟ್ಟಿನಲ್ಲಿ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಐಸೋಲೇಟೆಡ್ ಮತ್ತು ಕ್ವಾರೆಂಟೈನ್ ವಾರ್ಡ್ ತೆರೆಯಲಾಗಿದೆ. ಈ ವಾರ್ಡ್‍ನಲ್ಲಿ ಯಾವುದೇ ರೀತಿಯಿಂದಲೂ ಸೌಲಭ್ಯಗಳಿಗೆ ಲೋಪವಾಗದಂತೆ ಮತ್ತು ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಂಡು ಸೋಂಕಿತ ಪ್ರಕರಣಗಳಿದ್ದಲ್ಲಿ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಎಲ್ಲಾ ಕ್ರಮಗಳನ್ನು ಈ ಆಸ್ಪತ್ರೆ ಮತ್ತು ವಾರ್ಡ್‍ನಲ್ಲಿ ಕೈಗೊಳ್ಳಲಾಗಿದ್ದು, ಇದರ ಮೇಲ್ವಿಚಾರಣೆ ಮತ್ತು ವೈದ್ಯಾಧಿಕಾರಿ ಗಳ ಸಹಕಾರಕ್ಕೆ ಹೆಚ್ಚುವರಿಯಾಗಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.
ಉಪ ವಿಭಾಗಾಧಿಕಾರಿ ಹಾಗೂ ಉಪ ವಿಭಾಗೀಯ ದಂಡಾಧಿಕಾರಿಗಳಾದ ಜವರೇಗೌಡ ಟಿ., ಸಮಗ್ರ ಗಿರಿಜನ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ್, ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು ಅವರನ್ನೊಳಗೊಂಡಂತೆ ನಿಯೋಜಿತರಾದ ಅಧಿಕಾರಿಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಡೀನ್ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರೊಂದಿಗೆ ಸಮನ್ವಯತೆಯಿಂದ ನಿಯೋಜಿತ ಕರ್ತವ್ಯವನ್ನು ನಿರ್ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಆಸ್ಪತ್ರೆ ಮತ್ತು ವಾರ್ಡ್‍ಗಳಲ್ಲಿ ಶುಚಿತ್ವ ಕಾಪಾಡಿರುವ ಬಗ್ಗೆ ಪರಿಶೀಲನೆ ನಡೆಸುವುದು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಯಮಾನುಸಾರ ಮೇಲ್ವಸ್ತ್ರ, ಮಾಸ್ಕ್, ಶಿರಸ್ತ್ರಾಣ, ಹ್ಯಾಂಡ್ ಗ್ಲೌಸ್ ಇತ್ಯಾದಿಗಳನ್ನು ಧರಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
ಜೊತೆಗೆ 100 ಬೆಡ್ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಪರಿಶೀಲಿಸುವುದು, ವೆಂಟಿಲೇಟರ್ ವ್ಯವಸ್ಥೆ ಮತ್ತು ಅವಶ್ಯ ರಕ್ಷಣಾ ವ್ಯವಸ್ಥೆಗಳು ಸಾಕಷ್ಟು ಮತ್ತು ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತಪಡಿಸಿ ಕೊಳ್ಳುವುದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಡೀನ್ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದು.
ಇದರೊಂದಿಗೆ ಅವಶ್ಯವಿರುವ ಔಷಧಗಳು, ಹ್ಯಾಂಡ್ ಸಾನಿಟೈಸರ್, ಮಾಸ್ಕ್, ಡಿಸ್‍ಇನ್‍ಫೆಕ್ಟಂಟ್ ಕ್ಲೀನರ್‍ಗಳ ಕೊರತೆಯಾಗದಂತೆ ಹಾಗೂ ಸಕಾಲದಲ್ಲಿ ಲಭ್ಯವಾಗುವಂತೆ ಡೀನ್ ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರು ಕ್ರಮ ವಹಿಸುವುದು, ಕೊರೊನಾ ಐಸೋಲೇಟೆಡ್ ಮತ್ತು ಕ್ವಾರೆಂಟೈನ್ ವಾರ್ಡ್‍ಗಳಲ್ಲಿ ಸೌಲಭ್ಯಗಳ ಕೊರತೆಯಾಗದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಮೇಲ್ವಿಚಾರಣೆ ಮತ್ತು ನಿಗಾವಹಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.