(ವಿಶೇಷ ವರದಿ: ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಮಾ.19: ಬ್ರಹ್ಮಗಿರಿ ಅರಣ್ಯ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನದ ವೇಳೆ ಬೆಂಕಿ ಕಾಣಿಸಿಕೊಂಡಿದ್ದು ಸಮೀಪದ ಕಾಫಿ ತೋಟದಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಯ ಕಿಡಿಯಿಂದ ಸಮೀಪದ ಮಂಚಳ್ಳಿ ಬ್ರಹ್ಮಗಿರಿ ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿ ಸುಮಾರು 10 ಎಕರೆಗೂ ಹೆಚ್ಚು ಅರಣ್ಯ ನಾಶವಾಗಿದೆ.
ಅರಣ್ಯ ಸಿಬ್ಬಂದಿಗಳು, ಕಾರ್ಮಿಕರು ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಸಂಜೆ 7 ಗಂಟೆಯವರೆಗೂ ಸತತ ಪ್ರಯತ್ನ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾರಿ ಹೋಕರು ಬೆಂಕಿ ಕಾಣಿಸಿಕೊಂಡ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಗೊಂಡ ಬಳಿಕ ಗಾಳಿ ಬೀಸುವ ವೇಗ ಹೆಚ್ಚಾಗಿತ್ತು. ಇದರಿಂದ ಬೆಂಕಿಯ ಜ್ವಾಲೆಯು ಅರಣ್ಯಕ್ಕೆ ವ್ಯಾಪಿಸಿ ಸಾಕಷ್ಟು ಹಾನಿ ಉಂಟುಮಾಡಿತ್ತು. ಅರಣ್ಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿ ಗಳು ಸತತ ಆರು ಗಂಟೆಯವರೆಗೂ ಸುಡು ಬಿಸಿಲಿನ ನಡುವೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕತ್ತಲಾಗುತ್ತಿದ್ದಂತೆ ಸಂಪೂರ್ಣವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಬೆಂಕಿ ನಂದಿಸುವ ಕಾರ್ಯಕ್ಕೆ ಸ್ಥಳೀಯ ಕಾರ್ಮಿಕರು, ತೋಟದ ಕಾರ್ಮಿಕರು, ತೆರಳುವಷ್ಟರಲ್ಲಿ ಬೆಂಕಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತ್ತು. ಆರಂಭದಲ್ಲಿ ಬೆಂಕಿ ನಿಯಂತ್ರಣಕ್ಕೆ ತರಲು ಕಷ್ಟ ಪಡಬೇಕಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರಾಣದ ಹಂಗು ತೊರೆದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬೆಂಕಿಯ ಕಿಡಿಗಳು ಸಿಡಿಯುತ್ತಿದ್ದ ಹಿನೆÀ್ನಲೆಯಲ್ಲಿ ಕಾರ್ಯಾಚರಣೆಗೆ ಅಡ್ಡಿಯಾಗುತಿತ್ತು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿ ತಾವು ಕೂಡ ಬೆಂಕಿ ನಂದಿಸುವ ಕಾರ್ಯ ದಲ್ಲಿ ತೊಡಗಿದರಲ್ಲದೆ ಕಾರ್ಮಿಕರಿಗೆ, ಸಿಬ್ಬಂದಿಗಳಿಗೆ ಬೆಂಕಿ ಕೆಡಿಸುವ ಸಾಹಸದ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತಿದ್ದರು.