ಮಡಿಕೇರಿ, ಮಾ. 19: ಹಲವಾರು ಕಾರಣಗಳಿಂದ ವಿಶಿಷ್ಟತೆ ಹೊಂದಿರುವ ಕೊಡಗು ಜಿಲ್ಲೆಗೆ ಇತ್ತೀಚಿನ ವರ್ಷಗಳಲ್ಲಿ ಒಂದಲ್ಲಾ ಒಂದು ದುರಂತಗಳು ಎದುರಾಗುತ್ತಿರುವುದು ಇತರೆಡೆಗಳಿಗಿಂತ ತುಸು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದ ಜಿಲ್ಲೆಯ ಜನತೆಯನ್ನು ಕಂಗೆಡೆಸುತ್ತಿದೆ.
ಕೃಷಿ ಆಧಾರಿತ ಜಿಲ್ಲೆಯಾದ ಕೊಡಗು ಕಳೆದ ಕೆಲವು ವರ್ಷಗಳಿಂದ ಹವಾಮಾನದ ವೈಪರೀತ್ಯ, ಕಾರ್ಮಿಕರ ಸಮಸ್ಯೆ, ಕೃಷಿ-ಕಾಫಿ ಫಸಲಿಗೆ ಬೆಲೆ ಕುಸಿತ, ವ್ಯಾಪಾರೋದ್ಯಮ, ಪ್ರವಾಸೋದ್ಯಮ ಕುಂಠಿತದಂತಹ ಕಾರಣಗಳಿಂದ ಸಮಸ್ಯೆಗಳನ್ನು ಎದುರಿಸುತ್ತಲೇ ಬರುತ್ತಿದೆ. ಈ ಸಮಸ್ಯೆಗಳ ನಡುವೆ 2018 ಹಾಗೂ 2019ರ ಮಳೆಗಾಲ ಜಿಲ್ಲೆಯನ್ನು ತಲ್ಲಣಗೊಳಿಸಿರುವುದು ಮತ್ತೊಂದು ಆಘಾತ.
ಸತತ ಎರಡು ವರ್ಷಗಳು ಸಂಭವಿಸಿದ ಪ್ರಾಕೃತಿಕ ದುರಂತ, ಆಸ್ತಿಪಾಸ್ತಿ ನಷ್ಟ-ಸಾವು-ನೋವು ಮಳೆಗಾಲ ಆಗಮಿಸುತ್ತದೆ ಎಂಬ ಸಮಯ ಬಂದೊಡನೆ ಜನತೆಯಲ್ಲಿ ದುಗುಡ ಮೂಡಿಸುವಂತೆ ಮಾಡಿದೆ.
ಸತತ ಎರಡು ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದರ ಪರಿಣಾಮದಿಂದ ಜಿಲ್ಲೆ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗ ಪ್ರಸ್ತುತ ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಮಹಾಮಾರಿ ಬೇಸಿಗೆಯ ಆರಂಭಿಕ ಹಂತದಲ್ಲೇ ಕೊಡಗು ಜಿಲ್ಲೆಗೆ ವಕ್ಕರಿಸಿಕೊಂಡುಬಿಟ್ಟಿದೆ. ಜಿಲ್ಲೆಯಲ್ಲಿ ಕೊರೊನಾ ಶಂಕೆ ಭೀತಿ ಮೂಡಿಸಿತ್ತಾದರೂ ಈ ತನಕ ದೃಢಪಟ್ಟಿರಲಿಲ್ಲ.
ಇದೀಗ ಇಂದು ವ್ಯಕ್ತಿಯೋರ್ವರಲ್ಲಿ ಕೊರೊನಾ ದೃಢಪಟ್ಟಿರುವುದು ಜಿಲ್ಲೆಗೆ ಮತ್ತೊಂದು ಮರ್ಮಾಘಾತ ನೀಡಿದಂತಾಗಿದ್ದು, ಜಿಲ್ಲೆ ಸ್ತಬ್ಧಗೊಂಡಂತಾಗಿದೆ.