ಮಡಿಕೇರಿ, ಮಾ.19 : ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ಸೋಂಕು ದೇಶವ್ಯಾಪಿ ಹರಡುವುದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿಟ್ಟ ಕ್ರಮವನ್ನು ಕೈಗೊಂಡಿದ್ದು, ಸರ್ಕಾರ ಸೂಚಿಸುವ ಎಲ್ಲಾ ನಿಯಮಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ಆಡಳಿತ ವ್ಯವಸ್ಥೆಯ ಕಾರ್ಯಕ್ಕೆ ಸಹಕರಿಸಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಮನವಿ ಮಾಡಿದೆ.

ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಆತಂಕ ಮೂಡಿಸುತ್ತಿವೆ. ಸಾರ್ವಜನಿಕರು ಅಧಿಕೃತವಾಗಿ ಸರ್ಕಾರ ಹೊರಡಿಸುವ ಮಾಹಿತಿಯನ್ನಷ್ಟೇ ನಂಬಬೇಕೆಂದು ಅವರು ಮನವಿ ಮಾಡಿದರು.

ಜೆಡಿಎಸ್ ವಿರುದ್ಧ ಅಸಮಾಧಾನ

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಜಿಲ್ಲೆಗೆ ಬರಲಿಲ್ಲವೆಂದು ಜೆಡಿಎಸ್ ಜಿಲ್ಲಾಧ್ಯಕ್ಷರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುವ ಮೂಲಕ ಕ್ಷುಲ್ಲಕ ರಾಜಕೀಯ ಪ್ರದರ್ಶಿಸಿದ್ದಾರೆ ಎಂದು ರಾಬಿನ್ ದೇವಯ್ಯ ಇದೇ ಸಂದರ್ಭ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಂಸದ ಹೆಚ್.ವಿಶ್ವನಾಥ್ ಅವರೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದ ಜೆಡಿಎಸ್ ಜಿಲ್ಲಾಧ್ಯಕ್ಷರಿಗೆ ಇದೀಗ ರಾಜಕೀಯ ನೆಲೆ ಇಲ್ಲದಾಗಿದೆ. ಇದರಿಂದ ಹತಾಶೆಗೊಂಡಿರುವ ಜಿಲ್ಲಾಧ್ಯಕ್ಷರು ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಈ ರೀತಿಯ ರಾಜಕಾರಣವನ್ನು ಪ್ರದರ್ಶಿಸುತ್ತಿದ್ದಾರೆ.

ದಸರಾ ಆಚರಣೆ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಾ.ರಾ. ಮಹೇಶ್ ಅವರು ದಸರಾ ಆಚರಣೆಗೆ ಸರಕಾರದಿಂದ ರೂ. 50 ಲಕ್ಷ ಕೊಡಿಸುವುದಾಗಿ ಭರವಸೆ ನೀಡಿದ್ದರು. ಸರಕಾರ ನೀಡದಿದ್ದಲ್ಲಿ ತಾವೇ ಕೈಯಿಂದ ಕೊಡುವುದಾಗಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೆ ದಸರಾಕ್ಕೆ ಸಂಬಂಧಿಸಿದಂತೆ ಯಾವುದೇ ಹಣ ಬಂದಿರುವುದಿಲ್ಲ. ಜೆಡಿಎಸ್ ಜಿಲ್ಲಾಧ್ಯಕ್ಷರು ಮೊದಲು ಈ ಹಣವನ್ನು ಸಾ.ರಾ.ಮಹೇಶ್ ಅವರಿಂದ ದಸರಾ ಸಮಿತಿಗೆ ಕೊಡಿಸಲಿ ಎಂದು ಸವಾಲು ಹಾಕಿದರು.

ಜಿಲ್ಲೆಗೆ ಸಂಸದರು ಬಾರದೆ ಇರುವ ಕುರಿತು ಪ್ರತಿಕ್ರಿಯೆ ನೀಡಿರುವ ರಾಬಿನ್ ದೇವಯ್ಯ, ಸಂಸದರು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಕೆಲಸದ ಒತ್ತಡ ಇರುತ್ತದೆ. ಜಿಲ್ಲೆಯ ಇಬ್ಬರು ಶಾಸಕರು ಜಿಲ್ಲೆಯ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸದರು ತಮ್ಮದೇ ಕಾರ್ಯ ವ್ಯಾಪ್ತಿಯಲ್ಲಿ ಹೆಚ್ಚು ಚಟುವಟಿಕೆಯಿಂದ ಕಾರ್ಯಾ ಚರಿಸುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ಮಡಿಕೇರಿಯಲ್ಲಿ ಕಸದ ಸಮಸ್ಯೆ

ಮಡಿಕೇರಿ ನಗರದ ಕಸವಿಲೇವಾರಿ ಅಸಮರ್ಪಕವಾಗಿದ್ದು, ಸ್ಟೋನ್‍ಹಿಲ್ ಬಳಿ ಸುರಿಯುತ್ತಿರುವ ಕಸದ ರಾಶಿಯಿಂದ ಸುಬ್ರಮಣ್ಯ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ದುರ್ವಾಸನೆಯ ವಾತವಾರಣವಿದ್ದು, ಸೊಳ್ಳೆ ನೊಣಗಳ ಹಾವಳಿ ಹೆಚ್ಚಾಗಿದೆ. ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಲ್ಲಿ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದ ರಾಬಿನ್ ದೇವಯ್ಯ ವೈಜ್ಞಾನಿಕ ರೂಪದಲ್ಲಿ ಕಸವಿಲೇವಾರಿ ಮಾಡಲು ಅಗತ್ಯ ಕ್ರಮಕ್ಕಾಗಿ ಶಾಸಕರ ಗಮನ ಸೆಳೆಯುವುದಾಗಿ ಸ್ಪಷ್ಟಪಡಿಸಿದರು.

ವಿಪತ್ತು ಸಂದರ್ಭ ರಾಜಕೀಯ ಸರಿಯಲ್ಲ

ಜಿಲ್ಲಾ ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ಬಿ.ಸಿ. ನವೀನ್ ಕುಮಾರ್ ಮಾತನಾಡಿ, ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿದೆ. ಪರಿಸ್ಥಿತಿ ಹೀಗಿರುವಾಗ ಎಲ್ಲಾ ರಾಜಕೀಯ ಪಕ್ಷಗಳು ಮಾನವೀಯ ನೆಲೆಗಟ್ಟಿನಲ್ಲಿ ಸಮಾಜದ ಪರವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಆದರೆ ಇಂದು ವಿಪಕ್ಷಗಳು ಸೋಂಕಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲವೆಂದರು.

ದೇಶ ಸಂಕಷ್ಟದಲ್ಲಿರುವಾಗ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕೆ ಹೊರತು ರಾಜಕೀಯ ಮಾಡಬಾರದು ಎಂದು ಡಾ. ನವೀನ್ ಹೇಳಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಜಿಲ್ಲೆಯ ಔಷಧಿ ಅಂಗಡಿಗಳು ಮಾಸ್ಕ್ ಗಳನ್ನು ಮಾರಾಟ ಮಾಡುವುದಿಲ್ಲ ವೆಂದು ಘೋಷಿಸಿಕೊಂಡಿವೆ. ಆದರೆ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮಾಸ್ಕ್‍ಗಳ ಮಾರಾಟ ವ್ಯವಹಾರವೆಂದು ತಿಳಿಯದೆ ಸೇವೆ ಎಂದು ಭಾವಿಸಿ ಕಾರ್ಯ ನಿರ್ವಹಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಭೀಮಯ್ಯ, ಹೆಚ್.ಕೆ. ಮಾದಪ್ಪ ಹಾಗೂ ಸಾಮಾಜಿಕ ಜಾಲತಾಣದ ಅಧ್ಯಕ್ಷ ಕಾಳಚಂಡ ಅಪ್ಪಣ್ಣ ಉಪಸ್ಥಿತರಿದ್ದರು.