ಸೋಮವಾರಪೇಟೆ, ಮಾ.19: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಜಿಲ್ಲೆಯ ಯುವಕ ನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಸೋಮವಾರಪೇಟೆ ಪಟ್ಟಣ ಸಮೀಪದ ಗೌಡಳ್ಳಿ ನಿವಾಸಿ, ಗೌಡಳ್ಳಿ ವಿಎಸ್‍ಎಸ್‍ಎನ್‍ನ ನಿವೃತ್ತ ಉದ್ಯೋಗಿ ರಾಜಪ್ಪ ಮತ್ತು ನಾಗಮ್ಮ ಅವರ ಪುತ್ರ ನವೀನ್ (29) ಎಂಬಾತನೇ ಆತ್ಮಹತ್ಯೆಗೆ ಶರಣಾದವನಾಗಿದ್ದು, ನಿನ್ನೆ ರಾತ್ರಿ ವೇಳೆಯಲ್ಲಿ ದುರ್ಘಟನೆ ನಡೆದಿದೆ.
ಕಳೆದ 10 ವರ್ಷಗಳ ಹಿಂದೆ ಬೆಂಗಳೂರಿಗೆ ತೆರಳಿದ್ದ ನವೀನ್, ಅಲ್ಲಿಯೇ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಸಹೋದರನ ಕುಟುಂಬದೊಂದಿಗೆ ನೆಲೆಸಿದ್ದ ಈತ ನಿನ್ನೆ ರಾತ್ರಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಲಿಸುವ ರೈಲಿಗೆ ತಲೆಕೊಟ್ಟ ಪರಿಣಾಮ ನವೀನ್‍ನ ರುಂಡ-ಮುಂಡ ಬೇರ್ಪಟ್ಟು, ಕ್ಷಣ ಮಾತ್ರದಲ್ಲಿ ಪ್ರಾಣಪಕ್ಷಿ ಹಾರಿದೆ. ನವೀನ್ ಬೆಂಗಳೂರಿನಲ್ಲಿ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ. ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎನ್ನಲಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ.