ವೀರಾಜಪೇಟೆ, ಮಾ. 19: ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಮುಂಜಾಗರೂ ಕ್ರಮವಾಗಿ ಇಂದು ಪಟ್ಟಣ ಪಂಚಾಯಿತಿಯಿಂದ ನಾಲ್ಕನೇ ದರ್ಜೆ ನೌಕರರಿಗೆ, ಕಚೇರಿಯ ಸಿಬ್ಬಂದಿಗಳಿಗೆ, ಸದಸ್ಯರುಗಳಿಗೆ ಹಾಗೂ ವೀರಾಜಪೇಟೆ ಸಮುಚ್ಚಯ ಪೊಲೀಸ್ ಠಾಣೆಯ ಪೊಲೀಸರಿಗೆ ಮಾಸ್ಕ್‍ನ್ನು ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಶ್ರೀಧರ್, ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ಹೊಟೇಲ್‍ಗಳಲ್ಲಿಯೂ ಶುಚಿತ್ವ ಕಾಪಾಡುವಂತೆ ಮನವಿ ಮಾಡಲಾಗಿದ್ದು, ಹೊಟೇಲ್‍ಗಳಿಗೆ ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೀದಿಗಳಲ್ಲಿರುವ ಚರಂಡಿಗಳನ್ನು ದುರಸ್ತಿಪಡಿಸಿ ಔಷಧಿಗಳನ್ನು ಸಿಂಪಡಿಸಲಾಗುತ್ತಿದೆ. ಕುರಿ, ಕೋಳಿ, ಮೀನು ಮಾರುಕಟ್ಟೆಗಳಲ್ಲಿಯೂ ಶುಚಿತ್ವ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೊರೊನಾ ವೈರಸ್ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಶುಚಿತ್ವ ಹಾಗೂ ಕುಡಿಯುವ ನೀರು ಪೊರೈಕೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.