ಮಡಿಕೇರಿ, ಮಾ. 19: ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಹೊರ ರಾಜ್ಯದಿಂದ ಕಸವನ್ನು ತಂದು ಹಾಕುತ್ತಿರುವ ವಿಚಾರದ ಕುರಿತಾಗಿ ಈ ಪ್ರಕರಣ ಕಂಡು ಬಂದಲ್ಲಿ ಅಂತಹವರ ವಿರುದ್ಧ ಅಗತ್ಯ ಕಾನೂನು ಕ್ರಮಕೈಗೊಳ್ಳ ಲಾಗುವದು ಎಂದು ರಾಜ್ಯ ಅರಣ್ಯ ಸಚಿವ ಆನಂದ್‍ಸಿಂಗ್ ಅವರು ತಿಳಿಸಿದ್ದಾರೆ.‘ಶಕ್ತಿ’ಯಲ್ಲಿ ಇತ್ತೀಚೆಗೆ ಪ್ರಕಟಗೊಂಡಿದ್ದ ಕಸವಿಲೇವಾರಿಯ ಕುರಿತ ವರದಿಯನ್ನು ಆಧರಿಸಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ವಿಧಾನಪರಿಷತ್‍ನಲ್ಲಿ ಪ್ರಶ್ನಿಸಿದ್ದರು. ಈ ಪ್ರಸ್ತಾಪಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಅವರು ಲಿಖಿತ ಉತ್ತರ ನೀಡಿದ್ದು; ಕ್ರಮ ಜರುಗಿಸುವದಾಗಿ ಹೇಳಿದ್ದಾರೆ.ಸಚಿವರು ನೀಡಿರುವ ಉತ್ತರ ಇಂತಿದೆ ಈ ಬಗ್ಗೆ ವರದಿಯನ್ನು ಕೊಡಗು ಜಿಲ್ಲೆ ನಗರಾಭಿವೃದ್ಧಿ ಕೋಶದಿಂದ ಪಡೆಯಲಾಗಿದ್ದು; ಕೊಡಗು ಜಿಲ್ಲೆಯ 4 ನಗರ ಸ್ಥಳೀಯ ಸಂಸ್ಥೆಗಳಾದ ಮಡಿಕೇರಿ ನಗರಸಭೆ, ಕುಶಾಲನಗರ, ಸೋಮವಾರಪೇಟೆ ಮತ್ತು ವೀರಾಜಪೇಟೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ತ್ಯಾಜ್ಯವನ್ನು ಹೊರರಾಜ್ಯ ಹಾಗೂ ಜಿಲ್ಲೆಯಿಂದ ತಂದು ಸುರಿಯುತ್ತಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ.ಕೊಡಗು ವೃತ್ತದ ಮಡಿಕೇರಿ ವಿಭಾಗದ ವ್ಯಾಪ್ತಿಗೆ ಒಳಪಡುವ ವಲಯಗಳಾದ ಕುಶಾಲನಗರ, ಶನಿವಾರಸಂತೆ, ಸೋಮವಾರಪೇಟೆ, ಮಡಿಕೇರಿ, ಸಂಪಾಜೆ, ಭಾಗಮಂಡಲ ವಲಯಗಳಲ್ಲಿ ಅಂತರ್ ಜಿಲ್ಲೆಗಳಿಂದ ಬರುವ ಅಕ್ರಮ ತ್ಯಾಜ್ಯ ಸಾಗಾಣಿಕೆಗೆ ಸಂಬಂಧಿಸಿದಂತೆ ರಕ್ಷಣೆಗಾಗಿ ಕುಶಾಲನಗರ ವಲಯದಲ್ಲಿ ಕೊಪ್ಪ ಅರಣ್ಯ ತನಿಖಾ ಠಾಣೆ, ಸೋಮವಾರಪೇಟೆ ವಲಯದಲ್ಲಿ ಶಿರಂಗಾಲ ಮತ್ತು ಬಾಣಾವಾರ ಅರಣ್ಯ ತನಿಖಾ ಠಾಣೆ, ಸಂಪಾಜೆ ವಲಯದಲ್ಲಿ ಸಂಪಾಜೆ ತನಿಖಾ ಠಾಣೆ, ಭಾಗಮಂಡಲ ವಲಯದಲ್ಲಿ ಭಾಗಮಂಡಲ ತನಿಖಾ ಠಾಣೆಯು ಖಾಯಂ ಅರಣ್ಯ ತನಿಖಾ ಠಾಣೆಗಳಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತದೆ. ಇದರ ಜೊತೆಗೆ ಭಾಗಮಂಡಲ ವಲಯದಲ್ಲಿ ಅಂತರ್ ರಾಜ್ಯದಿಂದ ಬರುವಂತಹ ಅಕ್ರಮ ತ್ಯಾಜ್ಯ ವಿಲೇವಾರಿಗಾಗಿ ಭಾಗಮಂಡಲ ವಲಯದಲ್ಲಿ ಚೇಂಬೇರಿ ಅರಣ್ಯ ತನಿಖಾ ಠಾಣೆ ಮತ್ತು ಭಾಗಮಂಡಲ ತನಿಖಾ ಠಾಣೆಯಲ್ಲಿ ಹಗಲು ಮತ್ತು ರಾತ್ರಿ ತಪಾಸಣಾ ಕಾರ್ಯವನ್ನು ಖಾಯಂ ಸಿಬ್ಬಂದಿಗಳು ಹಾಗೂ ಹೊರಗುತ್ತಿಗೆ ನೌಕರರ ಮುಖಾಂತರ ನಿರ್ವಹಿಸಲಾಗುತ್ತಿದೆ.
ಅಲ್ಲದೆ, ಸೋಮವಾರಪೇಟೆ ವಲಯದಲ್ಲಿ ತಾತ್ಕಾಲಿಕವಾಗಿ ಸೂಳೆಕೋಟೆ ಚೆಕ್‍ಪೋಸ್ಟ್ ಅರಣ್ಯ ತನಿಖಾ ಠಾಣೆ, ಭಾಗಮಂಡಲ ವಲಯದಲ್ಲಿ ತಾತ್ಕಾಲಿಕವಾಗಿ ಚೆಂಬೇರಿ ಅರಣ್ಯ ತನಿಖಾ ಠಾಣೆಗಳು ಕಾರ್ಯನಿರ್ವಹಿಸುತ್ತಿರುತ್ತದೆ. ಸದರಿ ಅರಣ್ಯ ತನಿಖಾ ಠಾಣೆಗಳಲ್ಲಿ ಹಗಲು ಮತ್ತು ರಾತ್ರಿ ತಪಾಸಣಾ ಕಾರ್ಯವನ್ನು ಖಾಯಂ ಸಿಬ್ಬಂದಿಗಳು ಹಾಗೂ ಹೊರಗುತ್ತಿಗೆ ನೌಕರರ ಮುಖಾಂತರ ನಿರ್ವಹಿಸಲಾಗುತ್ತಿದೆ. ಬೇರೆ ರಾಜ್ಯಗಳಿಂದ
(ಮೊದಲ ಪುಟದಿಂದ) ಬರುವ ವಾಹನಗಳ ಮೇಲೆ ಕಟ್ಟೆಚ್ಚರ ವಹಿಸಿ ತಪಾಸಣೆ ನಡೆಸಲಾಗುತ್ತಿದೆ. ಅಂತಹ ವಾಹನಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು. ಇನ್ನು ಮುಂದೆ ತ್ಯಾಜ್ಯ ವಸ್ತುಗಳನ್ನು ಅರಣ್ಯ ಪ್ರದೇಶಗಳಲ್ಲಿ ಹಾಕುವುದು ಕಂಡುಬಂದಲ್ಲಿ ತಕ್ಷಣ ಅಂತಹವರ ವಿರುದ್ಧ ಅಗತ್ಯ ಕಾನೂನು ಕ್ರಮಕೈಗೊಳ್ಳಲಾಗುವುದು.
ವೀರಾಜಪೇಟೆ ಪ್ರಾದೇಶಿಕ ಅರಣ್ಯ ವಿಭಾಗ ವ್ಯಾಪ್ತಿಯ ವಲಯದಲ್ಲಿ ಒಟ್ಟು 2 ಅಂತರ ರಾಜ್ಯ ಅರಣ್ಯ ತಪಾಸಣಾ ಗೇಟುಗಳು ಇದ್ದು; ಕ್ರಮವಾಗಿ ಮಾಕುಟ್ಟ ತನಿಖಾಠಾಣೆ ಹಾಗೂ ಕುಟ್ಟ ತನಿಖಾ ಠಾಣೆಗಳಲ್ಲಿ ಹಾದು ಹೋಗುವ ವಾಹನಗಳನ್ನು ಸಂಪೂರ್ಣವಾಗಿ ಪರಿಶೋಧಿಸಿ ತ್ಯಾಜ್ಯ ವಸ್ತುಗಳು ಕಂಡುಬಂದಲ್ಲಿ ವಾಹನಗಳನ್ನು ವಾಪಸ್ಸು ಕೇರಳಕ್ಕೆ ಕಳುಹಿಸಲಾಗುತ್ತಿದೆ. ತ್ಯಾಜ್ಯ ವಸ್ತುಗಳನ್ನು ಸಾಗಿಸುವ ವಾಹನಗಳ ಮೇಲೆ ನಿಗಾವಹಿಸಿ ಕ್ರಮಕೈಗೊಳ್ಳಲು ಸಂಬಂಧಿಸಿದ ವಲಯ ಅರಣ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಕೇರಳದಿಂದ ಕರ್ನಾಟಕ ರಾಜ್ಯದೊಳಗೆ; ಅದೇ ರೀತಿ ಕರ್ನಾಟಕದಿಂದ ಕೇರಳ ರಾಜ್ಯಕ್ಕೆ ಪ್ರತಿನಿತ್ಯ 1000ಕ್ಕೂ ಹೆಚ್ಚು ಲಘು ವಾಹನಗಳು (ಕಾರು ಮಾದರಿಯ ವಾಹನಗಳು) ಸಂಚರಿಸುತ್ತಿದ್ದು; ಇಂತಹ ಲಘು ವಾಹನಗಳಲ್ಲಿ ಪ್ರಯಾಣಿಸುವವರು ಪ್ರಯಾಣದ ಸಮಯದಲ್ಲಿ ಆಹಾರ ಸಾಮಗ್ರಿಗಳನ್ನು ಪಾಲಿಥೀನ್ ಚೀಲಗಳು ಹಾಗೂ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಎಸೆಯುತ್ತಿದ್ದು; ಈಗಾಗಲೇ ವಲಯದ ಎಲ್ಲಾ ಶಾಖೆಯಿಂದಲೂ ಸಿಬ್ಬಂದಿಗಳನ್ನು ಬರಮಾಡಿಕೊಂಡು ರಾಜ್ಯದ ಹೆದ್ದಾರಿಗೆ ಹೊಂದಿ ಕೊಂಡಿರುವ ಅರಣ್ಯ ಪ್ರದೇಶದಿಂದ ತ್ಯಾಜ್ಯವಸ್ತುಗಳನ್ನು ಅರಣ್ಯದ ಹೊರಭಾಗದಲ್ಲಿ ಸಂಗ್ರಹಿಸಿ ನಾಶಪಡಿಸಲಾಗಿರುತ್ತದೆ.
ಪ್ರತಿನಿತ್ಯ ರಾತ್ರಿ ಸಮಯದಲ್ಲಿ ಮಾಕುಟ್ಟದಿಂದ ಪೆರುಂಬಾಡಿಯವರೆಗೆ ಬೇರೆ ಬೇರೆ ಸಮಯದಲ್ಲಿ 2 ಬಾರಿ ವಾಹನದಲ್ಲಿ ಗಸ್ತು ತಿರುಗಿ, ಖಾಸಗಿ ವಾಹನಗಳ ಮೇಲೆ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಮಡಿಕೇರಿ ವನ್ಯಜೀವಿ ವಿಭಾಗದಲ್ಲಿ ತಪಾಸಣಾ ಗೇಟುಗಳು ಇರುವುದಿಲ್ಲ.
ಬ್ರಹ್ಮಗಿರಿ ವನ್ಯಜೀವಿ ವಲಯದ ಕೇರಳ ಗಡಿಭಾಗವಾದ ಮಾಕುಟ್ಟದಲ್ಲಿ ಒಂದು ಪೊಲೀಸ್ ತಪಾಸಣಾ ಗೇಟು ಹಾಗೂ ಮಾಕುಟ್ಟ ಪ್ರಾದೇಶಿಕ ಅರಣ್ಯ ವಲಯದ ತಪಾಸಣಾ ಗೇಟುಗಳಿದ್ದು; ಕೇರಳ ಕಡೆಯಿಂದ ಯಾವುದೇ ಬೃಹತ್ ವಾಹನ, ಲಘು ವಾಹನಗಳಿಂದ ಬರುವ ಕಸವನ್ನು ತಪಾಸಣಾ ಗೇಟ್‍ಗಳಲ್ಲಿ ತಡೆದು ಕ್ರಮಕೈಗೊಳ್ಳಲಾಗುತ್ತಿದೆ. ಆದರೆ, ಮುಖ್ಯರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರ ಲಘುವಾಹನಗಳಾದ ಕಾರು, ಜೀಪು ಮತ್ತು ಇತರೆ ವಾಹನಗಳಿಂದ ಬರುವ ಜನರು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್‍ಗಳು ಹಾಗೂ ತಿಂಡಿಯಲ್ಲಿ ಪ್ಲಾಸ್ಟಿಕ್ ಕವರ್‍ಗಳನ್ನು ಬ್ರಹ್ಮಗಿರಿ ವನ್ಯಜೀವಿ ವಲಯ ವ್ಯಾಪ್ತಿಯ ಮಲಬಾರ್ - ಕೂರ್ಗ್ ಮುಖ್ಯರಸ್ತೆಯಲ್ಲಿ ಅಲ್ಲಲ್ಲಿ ಎಸೆಯುತ್ತಾರೆ. ಈ ಕಸವನ್ನು ಇಲಾಖಾ ಎಪಿಸಿ ಸಿಬ್ಬಂದಿಗಳು ವಾರಾಂತ್ಯದಲ್ಲಿ ಶುಚಿಗೊಳಿಸುತ್ತಾರೆ ಹಾಗೂ ಸ್ಥಳೀಯರಿಗೆ ಪ್ಲಾಸ್ಟಿಕ್‍ನ್ನು ಬಳಸದಂತೆ ಹಾಗೂ ವನ್ಯಧಾಮಗಳ ಬಳಿ ಕಸ ಹಾಕದಂತೆ ತಿಳುವಳಿಕೆ ನೀಡಲಾಗುತ್ತಿದೆ ಎಂದು ಸಚಿವರು ವಿವರ ನೀಡಿದ್ದಾರೆ.