ಶ್ರೀಮಂಗಲ, ಮಾ. 19: ಜಿಲ್ಲೆಯ ಅಂತರಾಜ್ಯ ಗಡಿ ಪ್ರದೇಶ ಕುಟ್ಟದಲ್ಲಿ ಹಕ್ಕಿ ಜ್ವರ ತಪಾಸಣಾ ಕೇಂದ್ರ ತೆರೆದು ಕೇರಳ ರಾಜ್ಯದಿಂದ ಜಿಲ್ಲೆಗೆ ಪ್ರವೇಶಿಸುವ ಜೀವ ಕೋಳಿ ಹಾಗೂ ಕೋಳಿ ಉತ್ಪನ್ನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ.ಶ್ರೀಮಂಗಲ ಪಶು ವೈದ್ಯಾಧಿಕಾರಿ ಡಾ.ಬಿ.ಜಿ.ಗಿರೀಶ್ ಹಾಗೂ ಹಿರಿಯ ಪಶು ವೈದ್ಯ ನಿರೀಕ್ಷಕ ಪೂಣಚ್ಚ ಅವರು ಕುಟ್ಟ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದಾರೆ.ಮೈಸೂರು ಜಿಲ್ಲೆಯಲ್ಲಿ ಹಕ್ಕಿ ಜ್ವರ ಪ್ರಕರಣ ದೃಡಪಟ್ಟಿರುವ ಹಿನ್ನೆಲೆಯಲ್ಲಿ ಈ ತಪಾಸಣೆಯನ್ನು ಮಾಡಲಾ ಗುತ್ತಿದೆ. ಜೀವ ಕೋಳಿ ಹಾಗೂ ಕೋಳಿ ಉತ್ಪನ್ನ ಸಾಗಾಟ ಕಂಡು ಬಂದರೆ ಅವುಗಳ ಮೇಲೆ ರಾಸಾಯನಿಕ (ಮೊದಲ ಪುಟದಿಂದ) ಸಿಂಪಡಣೆ ಮಾಡಿ ಹಕ್ಕಿಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಅಂತಹ ಜೀವ ಕೋಳಿ ಹಾಗೂ ಕೋಳಿ ಉತ್ಪನ್ನಗಳನ್ನು ನಾಶಪಡಿಸಲಾಗುತ್ತಿದೆ ಎಂದು ಡಾ.ಬಿ.ಜಿ. ಗಿರೀಶ್ ಹೇಳಿದರು. ಆದರೆ, ಇದುವರೆಗೆ ಜೀವ ಕೋಳಿ ಹಾಗೂ ಮಾಂಸ ಸಾಗಾಟದ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದರು.
ಕಾಗೆಗಳ ಸಾವು ತಂದ ಆತಂಕನಾಪೋಕು : ನಾಪೋಕ್ಲು ಸನಿಹದ ಕೊಟ್ಟಮುಡಿ ಗ್ರಾಮ ವ್ಯಾಪ್ತಿಯಲ್ಲಿ ಕಾಗೆಗಳು ಸಾವಿಗೀಡಾಗುತ್ತಿರುವದು ಕಂಡು ಬಂದಿದ್ದು; ಆತಂಕ ಸೃಷ್ಟಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಲವರು ಬಿಸಿಲಿನ ತಾಪದಿಂದಿರಬಹುದು ಎಂದು ಹೇಳುತ್ತಿದ್ದಾರೆ.
ಮತ್ತೊಂದು ಮೂಲದ ಪ್ರಕಾರ ವನ್ಯಪ್ರಾಣಿಗಳ ಉಪಟಳ ತಡೆಗಟ್ಟಲು ಯಾರೋ ಬಳಸಿದ ವಿಷಪದಾರ್ಥ ತಿಂದು ಸಾವಿಗೀಡಾಗಿರಬಹುದು ಎಂದೂ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಅಥವಾ ವಿಷ ಪದಾರ್ಥ ತಿಂದು ಸತ್ತ ಪ್ರಾಣಿಗಳ ಮಾಂಸವನ್ನು ತಿಂದೂ ಕಾಗೆಗಳು ಸಾವಿಗೀಡಾಗಿರಬಹುದು ಎಂಬದಾಗಿಯೂ ಹೇಳಲಾಗುತ್ತಿದ್ದು; ಖಚಿತತೆ ತಿಳಿದು ಬಂದಿಲ್ಲ.
-ಹರೀಶ್ ಮಾದಪ್ಪ, ದುಗ್ಗಳ ಸದಾನಂದ