ವೀರಾಜಪೇಟೆ, ಮಾ. 17: ಹೆಣ್ಣು ಹಿಂದಿನ ಕಾಲದಿಂದಲೂ ಹಲವು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾಳೆ. ಅಸಹಾಯಕ ಮಹಿಳೆಯ ಸ್ವಾತಂತ್ರ್ಯದ ರೋದನ ಇಂದು ಸಮಾಜ ಕೇಳಲು ತಯಾರಿಲ್ಲ ಎಂದು ಬಿಳಿಗುಂದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಬಿಂದು ಅಭಿಪ್ರಾಯಪಟ್ಟಿದ್ದಾರೆ. ಅವರು ಇಂದು ವೀರಾಜಪೇಟೆಯ ಬ್ರೈಟ್ ಪಬ್ಲಿಕ್ ಶಾಲೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಕ್ಕುಗಳ, ಅವಕಾಶಗಳ, ಸ್ವಾತಂತ್ರ್ಯದ ಹೊರತಾಗಿಯೂ ಮಹಿಳೆಯರು ಇಂದು ಕೇವಲ ಪುರುಷರು ಮಾತ್ರ ಕೈಯಾಡಿಸುತ್ತಿದ್ದ ಹಲವು ಕ್ಷೇತ್ರಗಳಲ್ಲಿ ಉನ್ನತ ಸಾಧನೆಯನ್ನು ಗೈದಿದ್ದಾರೆ. ಮಹಿಳೆಯು ತಾನು ಮಹಿಳೆ ಮತ್ತು ಅಬಲೆಯೆಂಬ ಕಾರಣಕ್ಕಾಗಿ ಯಾವುದೇ ಕ್ಷೇತ್ರದಿಂದ ಹಿಂಜರಿಯಬೇಕಾದ ಅಗತ್ಯವಿಲ್ಲ. ಪುರುಷನಷ್ಟೇ ತಾನೂ ಶಕ್ತಳು ಎಂದು ತಿಳಿದಿರಬೇಕು ಎಂದರು.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅಂಕಣಗಾರ್ತಿ ಉಷಾ ಪ್ರೀತಮ್ ತಮ್ಮ ಭಾಷಣದಲ್ಲಿ ಶಿಕ್ಷಣ, ಘನತೆ ಮತ್ತು ಸ್ಥಾನಮಾನ ಮಹಿಳೆಯರಲ್ಲಿ ಆತ್ಮಾಭಿಮಾನ ಮತ್ತು ವಿನಯಶೀಲತೆ ತುಂಬ ಬೇಕೇ ಹೊರತು ಅಹಂಕಾರವನ್ನಲ್ಲ ಎಂದರು.

‘ಸ್ತ್ರೀ-ಬದುಕುವ ಹಕ್ಕು ನನಗೂ ಇದೆ’ ಎಂಬ ವಿಷಯದಲ್ಲಿ ಮಾತನಾಡಿದ ಸಮೀರಾ ರಾಝಿಕ್‍ರವರು ಹಿಂದಿನ ಕಾಲದಲ್ಲಿ ಸಮಾನತೆಗಾಗಿ, ಸ್ವಾತಂತ್ರ್ಯಕ್ಕಾಗಿ, ಸಮಾನವೇತನಕ್ಕಾಗಿ, ಕೆಲಸದ ಸಮಯಕ್ಕಾಗಿ ಹೋರಾಡುತ್ತಿದ್ದ ಮಹಿಳೆಯರು ಇಂದು ಬದುಕುವ ಹಕ್ಕಿಗಾಗಿ ಒಂದು ಹಂತದವರೆಗೆ ಪೌರತ್ವಕ್ಕಾಗಿ ಬೀದಿಗಿಳಿಯಬೇಕಾದಂತಹ ಪರಿಸ್ಥಿತಿ ಬಂದೊದಗಿರುವುದು ದುರದೃಷ್ಟವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಎನ್.ಕೆ. ಜ್ಯೋತಿ ಮಾತನಾಡಿ, ಮಹಿಳೆ ಸುಶಿಕ್ಷಿತಳಾದಲ್ಲಿ ಮಾತ್ರ ಸಮಾಜವನ್ನು ಮುನ್ನಡೆಸುವುದು ಸಾಧ್ಯವೆಂದರು.

ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ವಹೀದಾ ಶೌಕತ್ ಅಧ್ಯಕ್ಷತೆ ವಹಿಸಿದ್ದರು. ವೀರಾಜಪೇಟೆಯ ವಕೀಲೆ ಹಾಜಿರಾ ಶರೀಫ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪಟ್ಟಣ ಪಂಚಾಯ್ತಿ ಸದಸ್ಯೆ ಫಸೀಹಾ ತಬಸ್ಸುಮ್, ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗ ಸ್ಥಾನೀಯ ಸಂಚಾಲಕಿ ಎಂ.ಟಿ.ಪಿ. ನಜ್ಮಾ ವೇದಿಕೆಯಲ್ಲಿದ್ದರು. ಝೈನಬಾ ರೆಹ್ಮಾನ್‍ರವರ ಕುರ್‍ಆನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕೆ.ಎಸ್. ರಫಿಯತ್ ಸ್ವಾಗತಿಸಿದರು. ಇ.ವಿ. ಶಂಶೀರ ವಂದಿಸಿದರು.