ಮಡಿಕೇರಿ, ಮಾ. 17: ಪೌರತ್ವ ಕಾಯ್ದೆ ಜಾರಿಯ ಮೂಲಕ ಮುಸಲ್ಮಾನರನ್ನು ಗುರಿಯಾಗಿಸಿಕೊಂಡು ಗೊಂದಲ ಸೃಷ್ಟಿಸಿದ ಕೇಂದ್ರ ಸರ್ಕಾರ ಇದೀಗ ಎನ್‍ಪಿಆರ್ (ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್) ಸರ್ವೆ ಕಾರ್ಯಕ್ಕೆ ಮುಂದಾಗಿದೆ ಎಂದು ಆರೋಪಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ ಮಾಕ್ರ್ಸ್‍ವಾದಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಇ.ರಾ. ದುರ್ಗಾಪ್ರಸಾದ್, ‘ಎನ್‍ಪಿಆರ್ ಪ್ರಶ್ನೆಗಳಿಗೆ ನಾವು ಉತ್ತರಿಸುವುದಿಲ್ಲ’ ಎನ್ನುವ ಘೋಷವಾಕ್ಯದೊಂದಿಗೆ ಹೊಸ ಕಾಯ್ದೆಯನ್ನು ವಿರೋಧಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಸಾಂ ರಾಜ್ಯದಲ್ಲಿ ಎನ್‍ಆರ್‍ಸಿ ಪ್ರಕ್ರಿಯೆ ಸಂದರ್ಭ ಸುಮಾರು 19 ಲಕ್ಷ ಬಡಜನರನ್ನು ಪೌರತ್ವ ಪಟ್ಟಿಯಿಂದ ಹೊರಗಿಡಲಾಯಿತು. ಎನ್‍ಪಿಆರ್‍ನಲ್ಲಿ ಕೇಳಲಾದ ದಾಖಲೆಗಳನ್ನು ನೀಡಲು ಅಷ್ಟು ಮಂದಿಯಿಂದ ಸಾಧ್ಯವಾಗಿರಲಿಲ್ಲ. ಅಸ್ಸಾಂನಲ್ಲಿ ವಿಶಿಷ್ಟ ಚಾರಿತ್ರಿಕ ಸಂದರ್ಭಕ್ಕೆ ಅನುಗುಣವಾಗಿ ಎನ್‍ಆರ್‍ಸಿಯನ್ನು ಜಾರಿಗೆ ತರಲಾಯಿತು. ಆದರೆ, ದೇಶದ ಇತರೆ ಭಾಗಗಳಲ್ಲಿ ಅಂತಹ ಯಾವುದೇ ವಿಶೇಷ ಸಂದರ್ಭಗಳು ಇಲ್ಲವಾದ್ದರಿಂದ ಇದನ್ನು ಜಾರಿ ಮಾಡುವ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ, ಎನ್‍ಪಿಆರ್ ಮತ್ತು ಎನ್‍ಸಿಆರ್ ಕಾಯ್ದೆಗಳಿಂದ ಬಡ ಬುಡಕಟ್ಟು ಜನರಿಗೆ ಹಿಂಸೆಯಾಗಲಿದೆ. ಈ ಕಾಯ್ದೆಗಳು ಅನಗತ್ಯವಾಗಿ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಆದ್ದರಿಂದ ಸ್ವಾತಂತ್ರ್ಯ ಹೋರಾಟಗಾರ ಭಗತ್‍ಸಿಂಗ್ ಅವರು

ಹುತಾತ್ಮರಾದ ದಿನವಾದ ಮಾ.23 ರಂದು ಎನ್‍ಪಿಆರ್ ವಿರುದ್ಧ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ದುರ್ಗಾಪ್ರಸಾದ್ ತಿಳಿಸಿದರು.

‘ಎನ್‍ಪಿಆರ್ ನಿಲ್ಲಿಸಿ ಎನ್‍ಆರ್‍ಸಿ ವಜಾ ಮಾಡಿ, ಸಿಎಎ ಹಿಂತೆಗೆಯಿರಿ, ನಾವು ನಿಮ್ಮ ಎನ್‍ಪಿಆರ್ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ’ ಎಂದು ಘೋಷಿಸುತ್ತಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಪಕ್ಷದ ಜಿಲ್ಲಾ ಪ್ರಮುಖ ಎ.ಸಿ. ಸಾಬು ಉಪಸ್ಥಿತರಿದ್ದರು.

ಜಿ.ಪಂ.ಸ್ಥಾಯಿ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ