ಶನಿವಾರಸಂತೆ, ಮಾ. 17: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕೊಳತ್ತೂರು ಗ್ರಾಮದಲ್ಲಿ ಸುಮಾರು 400 ವರ್ಷಗಳ ಇತಿಹಾಸ ಇರುವ ಬಾವಿ ಬಸವೇಶ್ವರ ದೇವರ ಆರಾಧನಾ ಮಹೋತ್ಸವ ತಾ. 16 ರಂದು ನೆರವೇರಿತು. ಸುತ್ತಮುತ್ತಲ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಆರಾಧನಾ ಮಹೋತ್ಸವದ ವಿಶೇಷವೆಂದರೆ ಪ್ರತಿ ವರ್ಷ ಶಿವರಾತ್ರಿ ಹಬ್ಬದ ನಂತರ ಹಾಗೂ ಯುಗಾದಿ ಹಬ್ಬದ ಒಳಗೆ ವಾರ್ಷಿಕ ವಿಶೇಷ ನಡೆಯುತ್ತಿದೆ. ಪ್ರಕೃತಿಯ ನಡುವೆ ಮೇಲ್ಭಾಗದಲ್ಲಿ ಉದ್ಭವ ಬಸವೇಶ್ವರ ದೇವರ ವಿಗ್ರಹದ ಗುಡಿಯಿದ್ದು, ಕೆಳಭಾಗದಲ್ಲಿ ಸಿಹಿ ನೀರಿನ ತೀರ್ಥದ ಕೊಳವಿದೆ. ಇದಕ್ಕೆ ಹೊಂದಿಕೊಂಡಂತೆ ಕೆರೆಯೊಂದು ಇದೆ. ವರ್ಷಕ್ಕೊಮ್ಮೆ ನಡೆಯುವ ಆರಾಧನಾ ಮಹೋತ್ಸವದಲ್ಲಿ ಭಕ್ತಾದಿಗಳು ಹಣ್ಣುಕಾಯಿ ಪೂಜೆ ಮಾಡಿಸಿಕೊಂಡು ತೀರ್ಥಕೊಳಕ್ಕೆ ಹರಕೆಯ ರೂಪದಲ್ಲಿ ನಾಣ್ಯಗಳನ್ನು ಹಾಕಿ ಸಿಹಿ ನೀರಿನ ತೀರ್ಥ ತೆಗೆದುಕೊಂಡು ಹೋಗುತ್ತಾರೆ.

ದೇವರಿಗೆ ಭಕ್ತಾದಿಗಳು ಮಾಡಿಕೊಂಡ ಹರಕೆಯಂತೆ ಸಾವಿರಾರು ತೆಂಗಿನಕಾಯಿ, ಇಡುಗಾಯಿ ಒಡೆಯಲಾಗುತ್ತದೆ. ಕೊಳದೊಳಗಿರುವ ಹರಕೆಯ ರೂಪದ ಸಾವಿರಾರು ನಾಣ್ಯಗಳನ್ನು ಹೊರತೆಗೆದು ಆರಾಧನಾ ಮಹೋತ್ಸವ ಆಚರಿಸಲು ಬಳಸಲಾಗುತ್ತದೆ. ಮಹೋತ್ಸವದ ದಿನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಮಹೋತ್ಸವದ ನೇತೃತ್ವವನ್ನು ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗೀರಿಶ್, ಪ್ರಮುಖರಾದ ಸಿ.ಕೆ. ಕೊಮಾರಪ್ಪ, ಡಿ.ಪಿ. ಬೋಜಪ್ಪ, ಸಿ.ಪಿ. ಹರೀಶ್, ಬೆಳ್ಳಿಯಪ್ಪ, ಗಣಪತಿ, ಪುಟ್ಟಪ್ಪ, ಚಂದ್ರಪ್ಪ, ಕುಶಾಲಪ್ಪ, ಸಿ.ಎಂ. ಸುರೇಶ್, ಸುನಿಲ್, ವಿನೋದ್ ಇತರರು ವಹಿಸಿದ್ದರು. ಉತ್ಸಾಹಿ ಯುವಕರ ತಂಡ ಅನ್ನಸಂತರ್ಪಣೆ ಇತ್ಯಾದಿ ಕಾರ್ಯಕ್ರಮದಲ್ಲಿ ಶ್ರಮಿಸಿದರು. ಈ ವರ್ಷ ಚಿಕ್ಕಕೊಳತ್ತೂರು ಗ್ರಾಮದಿಂದ ಮದುವೆಗಾಗಿ ಹೊರಗಡೆ ಹೋದ ಊರಿನ ಹೆಣ್ಣು ಮಕ್ಕಳು ಹಾಗೂ ಊರಿನ ಯುವಕರು ಸೇರಿ ಊರಿನ ಬಸವೇಶ್ವರ ದೇಗುಲಕ್ಕೆ ರೂ. 55 ಸಾವಿರ ರೂಪಾಯಿಗಳ 150 ಕುರ್ಚಿಗಳು, ಟೇಬಲ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದರು. ಊರಿನವರೇ ಸೇರಿ ರೂ. 1 ಲಕ್ಷ ವೆಚ್ಚದಲ್ಲಿ ದೇಗುಲಕ್ಕೆ ಅಡುಗೆ ಮನೆ ನಿರ್ಮಾಣ ಮಾಡಿಕೊಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿ, ಈಗಾಗಲೇ ದೇಶದ ಎಲ್ಲಾ ಕಡೆಯಲ್ಲೂ ಕೇಳಿ ಬರುತ್ತಿರುವ ಕೋವಿಡ್ -19 (ಕೊರೊನಾ ವೈರಸ್) ರೋಗದ ಮುನ್ನೆಚ್ಚರಿಕೆ ಕುರಿತು ಮಾತನಾಡಿದರು.