ವಿಶೇಷ ವರದಿ: ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು, ಮಾ. 17: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಹೂಳು ತುಂಬಿದ ಕೀರೆ ಹೊಳೆಗೆ ಇನ್ನೂ ಕೂಡ ಕಾಯಕಲ್ಪ ದೊರಕಿಲ್ಲ. ಕಳೆದ ಬಾರಿ ಸುರಿದ ಭಾರೀ ಮಳೆಗೆ ಕೀರೆ ಹೊಳೆಯು ತುಂಬಿ ಅಪಾರ ನಷ್ಟ ಸಂಭವಿಸಿತ್ತು. ವರ್ಷಂಪ್ರತಿ ಮುಂಜಾಗೃತಾ ಕ್ರಮಕೈಗೊಳ್ಳಬೇಕಾದ ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ನಿರ್ಲಕ್ಷ್ಯತನಕ್ಕೆ ಇದು ಸಾಕ್ಷಿಯಾಗಿತ್ತು. ಕೀರೆ ಹೊಳೆಯ ಬದಿಯಲ್ಲಿರುವ ಬಡಾವಣೆಗಳು ಸೇರಿದಂತೆ ಪ್ರತಿಷ್ಠಿತ ಬಡಾವಣೆಗಳಿಗೆ ಈ ಹೊಳೆಯು ತುಂಬಿ ಹರಿದ ಪರಿಣಾಮ ಎರಡು ದಿನಗಳ ಕಾಲ ನಗರವು ಸ್ತಬ್ಧವಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಪೊನ್ನಂಪೇಟೆ ಮುಖ್ಯ ರಸ್ತೆ ಸಂಪರ್ಕ ಕಳೆದುಕೊಂಡಿತ್ತು. ಗೋಣಿಕೊಪ್ಪ ಪೊನ್ನಂಪೇಟೆ ಮುಖ್ಯ ರಸ್ತೆಯಲ್ಲಿರುವ ಕಿರಿದಾದ ಸೇತುವೆಯನ್ನು ಕೂಡ ಅಗಲೀಕರಣ ಮಾಡುವಲ್ಲಿ ಇಲಾಖೆಯು ಮೌನ ವಹಿಸಿದೆ. ಗಮನ ಸೆಳೆಯ ಬೇಕಾದ ಪಂಚಾಯಿತಿ ಜನಪ್ರತಿನಿಧಿಗಳು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯುವಲ್ಲಿ ಸಂಪೂರ್ಣ ಎಡವಿದ್ದಾರೆ.

ಇನ್ನೂ ಎರಡು ತಿಂಗಳಿನಲ್ಲಿ ಮಳೆ ಆರಂಭವಾಗುವ ಮುನ್ಸೂಚನೆ ಇದ್ದರೂ ಕೀರೆ ಹೊಳೆಯನ್ನು ಶುದ್ದೀಕರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕರಲ್ಲಿ ಪಂಚಾಯ್ತಿ ಮೇಲಿನ ಆಕ್ರೋಶಕ್ಕೆ ಕಾರಣವಾಗಿದೆ. ಕೀರೆ ಹೊಳೆಯು ಶುದ್ದೀಕರಣಗೊಂಡಲ್ಲಿ ಯಾವುದೇ ಅಪಾಯವು ನಗರದಲ್ಲಿ ಸಂಭವಿಸುವುದಿಲ್ಲ. ಆದರೆ ಕೀರೆ ಹೊಳೆಯ ಬದಿಯನ್ನು ಅತಿಕ್ರಮಣ ಮಾಡಿರುವವರ ಮೇಲೆ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣ ಮೌನ ವಹಿಸಿದ್ದಾರೆ.! ಕೀರೆ ಹೊಳೆಗೆ ಸೇರುವ ಬೈಪಾಸ್ ರಸ್ತೆಯ ಕೈತೋಡು ಸಂಪೂರ್ಣ ಒತ್ತುವರಿಯಾಗಿದ್ದು ತೋಡಿಗೆ ಮಣ್ಣು ಸುರಿದು ಜಾಗವನ್ನು ಅತಿಕ್ರಮಣ ಮಾಡುವ ಮೂಲಕ ತೋಡನ್ನು ಕಿರಿದಾಗಿಸುತ್ತಿದ್ದಾರೆ. ಅಲ್ಲದೆ ತೋಡಿನಲ್ಲಿ ಸರಾಗವಾಗಿ ಹರಿಯುವ ನೀರಿನ ದಿಕ್ಕನ್ನೇ ಬದಲಾಯಿಸಿದ್ದಾರೆ. ಇದೆಲ್ಲವೂ ರಾಜರೋಷವಾಗಿ ನಡೆಯುತ್ತಿದ್ದರೂ ಈ ಬಗ್ಗೆ ಗಮನ ವಹಿಸಬೇಕಾದ ಅಧಿಕಾರಿಗಳು ಮಾತ್ರ ಈ ವಿಷಯವು ನಮಗೆ ಸಂಬಂಧಪಡದ ವಿಚಾರವೆಂದು ಸುಮ್ಮನಾಗಿದ್ದಾರೆ.

ಕೀರೆ ಹೊಳೆಯನ್ನು ಅತಿಕ್ರಮಿಸಿಕೊಂಡು ತಡೆಗೋಡೆಗಳನ್ನು ನಿರ್ಮಿಸಿರುವ ಪ್ರಭಾವಿ ವ್ಯಕ್ತಿಗಳ ಮೇಲೆ ಕ್ರಮಕ್ಕೆ ಮುಂದಾಗದ ಪಂಚಾಯಿತಿ ಕೇವಲ ಕಾಲಹರಣದಲ್ಲಿಯೇ ಕಳೆಯುತ್ತಿದೆ. ಇತ್ತೀಚೆಗೆ ಕಸದ ರಾಶಿಗಳು ಕೀರೆ ಹೊಳೆ ಬದಿಯನ್ನು ಅತಿಕ್ರಮಿಸಿಕೊಳ್ಳುತ್ತಿವೆ. ಇದರಿಂದ ದುರ್ನಾತ ಬೀರುತ್ತಿದ್ದು ಬಡಾವಣೆಗಳಲ್ಲಿರುವ ನಿವಾಸಿಗಳಿಗೆ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ರಸ್ತೆಯಲ್ಲಿ ಸಂಚಾರ ಮಾಡುವವರು ಮೂಗು ಮುಚ್ಚಿಕೊಂಡು ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ಬಾರಿ ಸುರಿದ ಮಳೆಯಿಂದ ಅಪಾರ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಕೀರೆ ಹೊಳೆಯನ್ನು ಹಾಗೂ ಕೈ ತೋಡನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ ಮಾಲೀಕರ ಮೇಲೆ ಕ್ರಮ ಕೈಗೊಳ್ಳುವ ಪ್ರಸ್ತಾಪ ಜಿಲ್ಲಾಡಳಿತದ ಮುಂದೆ ಇತ್ತಾದರೂ ಇದೀಗ ಜಿಲ್ಲಾಡಳಿತ ಈ ವಿಷಯದಲ್ಲಿ ಮೌನ ವಹಿಸಿರುವುದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.