ಸೋಮವಾರಪೇಟೆ, ಮಾ. 17: ಮಡಿಕೇರಿಯ ಗಾಳಿಬೀಡುವಿನಲ್ಲಿರುವ ನವೋದಯ ಶಾಲೆಗೆ ಜಿಲ್ಲಾ ಪಂಚಾಯತ್ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಶಾಲೆಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅವರುಗಳು ಭೇಟಿ ನೀಡಿ ಶಾಲಾ ಆವರಣ, ಕೊಠಡಿ, ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಪರಿಶೀಲಿಸಿದರು. ಹೆಚ್ಚಿನ ಸುಧಾರಣೆಗಾಗಿ ಜಿಲ್ಲಾ ಪಂಚಾಯತ್ನಿಂದ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದರು.
ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಬಗ್ಗೆ ಮಾಹಿತಿ ಪಡೆದ ಪ್ರಮುಖರು, ಈಗಾಗಲೇ ಸಂಸದರ ನಿಧಿಯಿಂದ ಬಿಡುಗಡೆಯಾಗಿರುವ ಅನುದಾನದಡಿ ಕಾಮಗಾರಿ ಕೈಗೊಳ್ಳಲು ಸೂಚಿಸಿದರು. ಶಾಲೆಗೆ ಹೆಚ್ಚಿನ ಅನುದಾನದ ಅಗತ್ಯತೆಯಿದ್ದು, ಶಾಸಕರುಗಳೊಂದಿಗೆ ಚರ್ಚಿಸಿ ಹಣ ಬಿಡುಗಡೆಗೆ ಪ್ರಯತ್ನಿಸಲಾಗುವದು ಎಂದರು.
ಈ ಸಂದರ್ಭ ಪ್ರಾಂಶುಪಾಲ ಐಸಾಕ್, ಪೋಷಕರುಗಳಾದ ಶುಭಕರ್, ಚಿದಾನಂದ್, ವಿಜಯ ಕುಮಾರ್, ಆಶಿಕಾ, ಪುಟ್ಟೇಗೌಡ, ಸಂಸದರ ಆಪ್ತ ಸಹಾಯಕ ಶರತ್ ಸೇರಿದಂತೆ ಇತರರು ಇದ್ದರು.