ಗೋಣಿಕೊಪ್ಪಲು, ಮಾ.18: ದ.ಕೊಡಗಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಹುಲಿ ದಾಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸತತವಾಗಿ ಎಡವುತ್ತಿದೆ. ಅನೇಕ ಹೋರಾಟಗಳು, ಪ್ರತಿಭಟನೆಗಳು ನಡೆದರೂ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ವಿಶೇಷವಾಗಿ ಹುಲಿ ದಾಳಿಯಿಂದ ದ.ಕೊಡಗಿನ ಬಾಳೆಲೆ, ಹುದಿಕೇರಿ, ಶ್ರೀಮಂಗಲ ಹೋಬಳಿಗಳಲ್ಲಿ ಹಲವಾರು ಜಾನುವಾರುಗಳನ್ನು ಕೊಂದು ತಿಂದಿರುವ ಹುಲಿಯನ್ನು ಇಲ್ಲಿಯ ತನಕ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಸಾಧ್ಯವಾಗಿಲ್ಲ. ಜಾನುವಾರು ವಾರಸುದಾರರಿಗೆ ಒಂದೆಡೆ ಭಾರೀ ನಷ್ಟ ಸಂಭವಿಸಿದರೂ ಇಲಾಖೆ ನೀಡುವ 10 ಸಾವಿರ ಪರಿಹಾರ ಹಣ ಏನೇನೂ ಸಾಲದು. ಇದರಿಂದ ಜಾನುವಾರುಗಳನ್ನು ಸಾಕುವುದನ್ನೇ ರೈತ ಕೈ ಬಿಡುವ ನಿರ್ಧಾರಕ್ಕೆ ಬಂದಿದ್ದಾನೆ. ಕಾಫಿ ತೋಟಗಳಲ್ಲಿ ಹಾಗೂ ಭತ್ತದ ಗದ್ದೆಗಳಲ್ಲಿ ಸಮಯ ವಲ್ಲದ ಸಮಯದಲ್ಲಿ ಹುಲಿ ಪ್ರತ್ಯಕ್ಷವಾಗುತ್ತಿರುವುದು ಗ್ರಾಮದ ಜನರಲ್ಲಿ ಜೀವಭಯ ಹಾಗೂ ಆತಂಕಕ್ಕೆ ಕಾರಣವಾಗುತ್ತಿದೆ.

ಈ ಭಾಗದ ಅರಣ್ಯದಂಚಿನ ಗ್ರಾಮಗಳಲ್ಲಿ ವ್ಯಾಘ್ರನ ಓಡಾಟ ಹೆಚ್ಚಾಗಿ ಕಾಣಸಿಗುತ್ತದೆ. ಒಂದೆಡೆ ಹುಲಿರಾಯನ ಭಯವಾದರೆ ಮತ್ತೊಂದೆಡೆ ಹುಲಿ ಹೆಜ್ಜೆಯನ್ನು ಕಂಡು ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ದೇವನೂರು, ಬಾಳೆಲೆ, ಗ್ರಾಮಗಳಲ್ಲಿ ಒಂದರ ಹಿಂದೆ ಮತ್ತೊಂದು ಹುಲಿಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಗ್ರಾಮದಂಚಿನ ಜನರಲ್ಲಿ, ಕಾರ್ಮಿಕರಲ್ಲಿ ಜೀವಭಯ ಕಾಡುತ್ತಿದೆ. ವಿವಿಧೆಡೆ ಅರಣ್ಯ ಪ್ರದೇಶಗಳು ಕಡಿಮೆಯಾಗುತ್ತಿರುವುದು ಹುಲಿಗಳು ಕಾಡಂಚಿನ ಗ್ರಾಮಗಳಿಗೆ ಬರಲು ಕಾರಣವಾಗುತ್ತಿದೆ ಎನ್ನಲಾಗಿದೆ. ನಾಗರಹೊಳೆ ಉದ್ಯಾನವನದಲ್ಲಿ ಹುಲಿಯ ಕಾದಾಟಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಈ ಭಾಗದಲ್ಲಿರುವ ಹುಲಿಗಳು ತನ್ನ ರಕ್ಷಣೆಗಾಗಿ ನಾಡಿನತ್ತ ಹೆಜ್ಜೆ ಹಾಕಿವೆ. ಅರಣ್ಯ ದಂಚಿನಲ್ಲಿರುವ ಮನೆಗಳಿಗೆ, ಕೊಟ್ಟಿಗೆ, ಭತ್ತದ ಗದ್ದೆಗಳಲ್ಲಿ ಮೇಯಲು ಬಿಟ್ಟಿರುವ ಹಸುಗಳನ್ನು ಹುಲಿ ಬೇಟೆಯಾಡಿ ತಿನ್ನುತ್ತಿದೆ. ದ.ಕೊಡಗಿನ ಕೊಟ್ಟಗೇರಿ, ಮಾಲ್ದಾರೆ, ಅಬ್ಬೂರು, ಕೋತೂರು, ಕುಟ್ಟ, ಕಾನೂರು, ಕೋಣಗೇರಿ, ಬೆಕ್ಕೆಸೊಡ್ಲೂರು,

(ಮೊದಲ ಪುಟದಿಂದ) ದೇವನೂರು ಹೈಸೊಡ್ಲೂರು, ಮುಂತಾದ ಕಾಡಂಚಿನ ಪ್ರದೇಶದಲ್ಲಿ ಹೆಚ್ಚಾಗಿ ದಾಳಿ ನಡೆಸಿವೆ. ಅರಣ್ಯ ಸಿಬ್ಬಂದಿಗಳು ಹುಲಿ ಸೆರೆಗೆ ಬೋನನ್ನು ಇಟ್ಟರೂ ಯಾವುದೆ ಪ್ರಯೋಜನವಾಗುತ್ತಿಲ್ಲ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸುಮಾರು 640 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿದ್ದು ಈ ವ್ಯಾಪ್ತಿಯಲ್ಲಿ ನೂರಾರು ಹುಲಿ ಹಾಗೂ ಹೊಸ ಮರಿಗಳು ಕಾಣಿಸಿಕೊಂಡಿವೆ. ಆಹಾರಕ್ಕಾಗಿ ಹುಲಿಗಳು ಗ್ರಾಮಗಳತ್ತ ಬರುತ್ತಿದ್ದು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿವೆ. ವಯಸ್ಸಾದ ಹಾಗೂ ಹುಲಿಗಳ ನಡುವೆ ಉಂಟಾಗುವ ಕಾದಾಟದಲ್ಲಿ ಸೋತ ಹುಲಿಗಳು ಬೇಟೆಯಾಡಲು ಸಾಧ್ಯವಾಗದೆ ಕಾಫಿ ತೋಟಗಳು ಹಾಗೂ ಕಾಡಂಚಿನ ಜನವಸತಿ ಪ್ರದೇಶಗಳತ್ತ ಆಹಾರ ಅರಸಿಕೊಂಡು ಬರುತ್ತಿವೆ.ತೋಟಗಳಲ್ಲಿ ಹಾಗೂ ಭತ್ತದ ಗದ್ದೆಗಳಲ್ಲಿ ಮೇಯುವ ಜಾನುವಾರುಗಳ ಮೇಲೆ ಸುಲಭವಾಗಿ ಧಾಳಿ ಮಾಡುತ್ತಿವೆ. ಅರಣ್ಯ ವ್ಯಾಪ್ತಿಯಿಂದ ತೋಟಗಳತ್ತ ಹುಲಿಗಳು ವಲಸೆ ಬರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.