ಸೋಮವಾರಪೇಟೆ, ಮಾ. 17: ಸಮೀಪದ ಕಲ್ಕಂದೂರು ಗ್ರಾಮದ ಕೆ.ಸಿ.ಸಿ. ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಸ್ಥಳೀಯ ಯಡೂರು ಬಿ.ಟಿ.ಸಿ.ಜಿ. ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಯಡೂರು ವೈ.ಸಿ.ಸಿ. ತಂಡ ಪ್ರಥಮ, ಮಡಿಕೇರಿ ತಂಡ ದ್ವಿತೀಯ ಸ್ಥಾನ ಪಡೆಯಿತು.
ಪ್ರಥಮ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು 12 ಸಾವಿರ ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ಹಾಗೂ 7 ಸಾವಿರ ನಗದು ವಿತರಿಸಲಾಯಿತು. ಇದರೊಂದಿಗೆ ಬೆಸ್ಟ್ ಕ್ಯಾಚರ್ ಪ್ರಶಸ್ತಿಯನ್ನು ಮಡಿಕೇರಿಯ ಸಾಜಿದ್, ಬೆಸ್ಟ್ ಬ್ಯಾಟ್ಸ್‍ಮೆನ್ ಪ್ರಶಸ್ತಿಯನ್ನು ವೈಸಿಸಿ ತಂಡದ ಕಿಟ್ಟು, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಮಡಿಕೇರಿ ತಂಡದ ಮೂರ್ತಿ, ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯನ್ನು ರಾಕೇಶ್, ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ನಿಖಿಲ್ ಅವರುಗಳು ಪಡೆದುಕೊಂಡರು. ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿದ್ದ ಹಾನಗಲ್ಲು ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್ ಮಾತನಾಡಿ, ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದ್ದು, ಸಾಮರಸ್ಯವನ್ನು ಬೆಸೆಯುವ ವೇದಿಕೆಗಳಾಗಿವೆ ಎಂದು ಅಭಿಪ್ರಾಯಿಸಿದರು. ಮತ್ತೋರ್ವ ಸದಸ್ಯೆ ವನಜಾಕ್ಷಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಡೆಯುವ ಕ್ರೀಡಾಕೂಟಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಪ್ರತಿಭೆಗಳನ್ನು ಗುರುತಿಸಲು ಕ್ರೀಡಾಕೂಟಗಳು ಸಹಕಾರಿಯಾಗಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಸಿ.ಸಿ. ಕ್ಲಬ್‍ನ ಅಧ್ಯಕ್ಷ ಅದ್ರಾಮ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಹಸೈನಾರ್, ಗೋವಿಂದ, ಅನಿಲ್, ಸುರೇಶ್, ನಾಗರಾಜು, ಅಬ್ದುಲ್ ಸಲಾಂ ಸೇರಿದಂತೆ ಇತರರು ಉಪಸ್ಥಿತರಿದ್ದರು.