ಮಡಿಕೇರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೊರೊನಾ ವೈರಸ್ ಸೋಂಕು ಕುರಿತು ಜಿಲ್ಲೆಯಾದ್ಯಂತ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.
ಕೊರೊನಾ ವೈರಸ್ ಬಗ್ಗೆ ಮುಂಜಾಗೃತಾ ಕ್ರಮವಹಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಒಳಗೊಂಡ ಆರ್‍ಆರ್‍ಟಿ ತಂಡ ರಚಿಸಿದೆ. ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕುಗಳ ಮಟ್ಟದಲ್ಲಿ ತಾಲೂಕು ಆರೋಗ್ಯಾಧಿಕಾರಿ ಒಳಗೊಂಡ ಆರ್‍ಆರ್‍ಟಿ ತಂಡ ರಚಿಸಲಾಗಿದ್ದು, ಕಣ್ಗಾವಲಿರಿಸಲಾಗಿದೆ. ಕಾಫಿ ತೋಟದ ಮಾಲೀಕರು, ಕಾಫಿ ಕಾರ್ಮಿಕರ ಸಂಘದ ಅಧ್ಯಕ್ಷರುಗಳಿಗೆ ಪತ್ರ ಬರೆದು ಕೇರಳದಿಂದ ವಲಸೆ ಬರುವ ಕಾರ್ಮಿಕರಿಗೆ ಎಚ್ಚರ ವಹಿಸುವುದು ಹಾಗೂ ಕೊಡಗಿನ ಕಾರ್ಮಿಕರು ಕೇರಳಕ್ಕೆ ಹೋಗದಂತೆ ಅರಿವು ಮೂಡಿಸಲು ಕ್ರಮವಹಿಸಿದೆ.
ಜಿಲ್ಲೆಯ ಗಡಿ ಪ್ರದೇಶಗಳಾದ ವೀರಾಜಪೇಟೆ ತಾಲೂಕಿನ ಕುಟ್ಟ, ಮಾಕುಟ್ಟ ಮಡಿಕೇರಿ ತಾಲೂಕಿನ ಕರಿಕೆ, ಸಂಪಾಜೆ ಮುಂತಾದ ಪ್ರದೇಶಗಳಲ್ಲಿ ಆರೋಗ್ಯ ಸಿಬ್ಬಂದಿಗಳನ್ನೊಳಗೊಂಡ ತಂಡಗಳನ್ನು ರಚಿಸಿದ್ದು, ಇವರು ಬಸ್ ಹಾಗೂ ಇತರೆ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕರಪತ್ರಗಳನ್ನು ಹಂಚುವುದು, ಭಿತ್ತಿಪತ್ರ ಪ್ರದರ್ಶನದ ಮೂಲಕ ಅರಿವು ಮೂಡಿಸಲು ಪ್ರತೀದಿನ ಕಾರ್ಯ ನಿರ್ವಹಿಸಿ ಅಗತ್ಯ ಕಣ್ಗಾವಲಿರಿಸಿದೆ. ಜಿಲ್ಲೆಯ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳು, ಖಾಸಗಿ ಬಸ್ ನಿಲ್ದಾಣಗಳು, ಆಟೋ ನಿಲ್ದಾಣಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಪ್ರತಿ ದಿನ ಅರಿವು ಮೂಡಿಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ತಂಡಗಳು ಕರಪತ್ರ, ಭಿತ್ತಿಪತ್ರ ಹಂಚುವುದರ ಮೂಲಕ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿವೆ. ಜಿಲ್ಲೆಗೆ ಹೊರ ದೇಶಗಳಿಂದ ಬಂದ ವ್ಯಕ್ತಿಗಳ ಮಾಹಿತಿಯನ್ನು ಆಧಾರಿಸಿ ಸ್ಥಳ, ಮನೆ ಭೇಟಿ ನೀಡಿ ಅವರಿಗೆ 14 ದಿನಗಳವರೆಗೆ ಮನೆಯಲ್ಲಿಯೇ ಉಳಿಯುವಂತೆ ಹಾಗೂ ಯಾವುದೇ ಸಭೆ-ಸಮಾರಂಭಗಳಿಗೆ ಭಾಗವಹಿಸದಂತೆ ಮಾಹಿತಿ ನೀಡುವುದು, ಈ ಸಮಯದಲ್ಲಿ ಇವರಿಗೆ ರೋಗ ಲಕ್ಷಣಗಳು ಕಂಡುಬಂದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡುವುದು ಹಾಗೂ ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗೆ ಭೇಟಿ ನೀಡುವಂತೆ ಕ್ರಮವಹಿಸಲಾಗಿದೆ. ಈ ಎಲ್ಲಾ ಚಟುವಟಿಕೆಗಳನ್ನು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಅರೆ ವೈದ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಗ್ರಾಮ ಮಟ್ಟದಲ್ಲಿ ನಡೆಸಿ ಜನರಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ. ಕೆ. ಮೋಹನ್ ಮಾಹಿತಿ ನೀಡಿದ್ದಾರೆ.