*ಸಿದ್ದಾಪುರ, ಮಾ. 17: ಕೊನೆಗೂ ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಅಭ್ಯತ್ ಮಂಗಲದ ಅತ್ತಿಮಂಗಲ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಸುಮಾರು 60 ವರ್ಷಗಳಷ್ಟು ಹಳೆಯದಾದ ಬೃಹತ್ ಕೆರೆ ಕಳೆದ ಕೆಲವು ವರ್ಷಗಳಿಂದ ಕಾಡು ಪಾಲಾಗಿತ್ತು. ಸಿದ್ದಾಪುರ-ಮಡಿಕೇರಿ-ಕುಶಾಲನಗರ ರಸ್ತೆಯಲ್ಲಿರುವ ಈ ಕೆರೆಯಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ದುರಸ್ತಿ ಕಾರ್ಯಕ್ಕೆ ಆಸಕ್ತಿ ತೋರಿದ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಸದಸ್ಯ ಅಂಚೆಮನೆ ಸುಧಿ ಅವರು ಕಾಮಗಾರಿಗೆ ಚಾಲನೆ ನೀಡಿದರು. ಈ ಹಿಂದೆ ಜಿ.ಪಂ. ಸದಸ್ಯ ರಾಗಿದ್ದ ಬಲ್ಲಾರಂಡ ಮಣಿ ಉತ್ತಪ್ಪ ಅವರು ತಮ್ಮ ಅವಧಿಯಲ್ಲಿ ಅತ್ತಿಮಂಗಲ ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದ್ದರಾದರೂ ಅತಿಯಾದ ಮಳೆಯಿಂದ ಕಾಮಗಾರಿ ನಿರ್ವಹಿಸಲಾಗದೆ ಸ್ಥಗಿತಗೊಂಡಿತ್ತು. ಕಾಡುಪಾಲಾಗಿದ್ದ ಕೆರೆಗೆ ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಕಸ ಮತ್ತು ಮಾಂಸದ ತ್ಯಾಜ್ಯಗಳನ್ನು ಸುರಿಯುತ್ತಿದ್ದುದರಿಂದ ದುರ್ವಾಸನೆ ಬೀರುತ್ತಿತ್ತು. ಕಾಡು ಬೆಳೆದು ರಸ್ತೆಯನ್ನು ಆವರಿಸಿದ ಕಾರಣ ಅಪಘಾತಗಳು ಮತ್ತು ದ್ವಿಚಕ್ರ ವಾಹನಗಳು ಬಿದ್ದ ಘಟನೆಗಳೂ ಸಂಭವಿಸಿದೆ. ಕಾಡಾನೆ ಸೇರಿದಂತೆ ವನ್ಯಜೀವಿಗಳು ನೀರು ಕುಡಿಯಲೆಂದು ಈ ಕೆರೆಗೆ ಬರುತ್ತಿದ್ದುದರಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣವೂ ಸೃಷ್ಟಿಯಾಗಿತ್ತು.
ಇದನ್ನು ಮನಗಂಡ ಗ್ರಾ.ಪಂ ಇದೀಗ ತ್ವರಿತವಾಗಿ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ. ಗ್ರಾಮದಲ್ಲಿ ಸಾಮಾಜಿಕ ಕಳಕಳಿಯನ್ನು ಹೊಂದಿ ಶ್ರಮದಾನದ ಮೂಲಕ ಗಮನ ಸೆಳೆದಿರುವ ನೆಲ್ಯಹುದಿಕೇರಿಯ ಶ್ರೀಮುತ್ತಪ್ಪ ಯುವ ವೇದಿಕೆ ಸಂಘಟನೆಗೆ ಕೆರೆಯ ನಿರ್ವಹಣೆಯ ಜವಬ್ದಾರಿಯನ್ನು ನೀಡಲಾಗಿದೆ ಎಂದು ಅಂಚೆಮನೆ ಸುಧಿ ತಿಳಿಸಿದರು.
ಕೆರೆಯ ಹೂಳೆತ್ತುವುದು, ಸುತ್ತ ಬೇಲಿ ಅಳವಡಿಸುವುದು, ರಸ್ತೆ ಬದಿ ಗ್ರಿಲ್ಗಳನ್ನು ಅಳವಡಿಸುವುದು ಮತ್ತು ಅಭಿವೃದ್ಧಿ ಹೊಂದಿದ ಕೆರೆಯಲ್ಲಿ ಮೀನುಗಳನ್ನು ಅಭಿವೃದ್ಧಿ ಪಡಿಸುವುದು ಯೋಜನೆಯಲ್ಲಿ ಸೇರಿದೆ ಎಂದು ಮಾಹಿತಿ ನೀಡಿದರು. ಮಳೆಗಾಲ ಆರಂಭಕ್ಕೂ ಮೊದಲು ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭ ಶ್ರೀಮುತ್ತಪ್ಪ ಯುವ ವೇದಿಕೆಯ ಯುವ ಸಮೂಹ ಶ್ರಮದಾನ ನಡೆಸಿತು.