ಸೋಮವಾರಪೇಟೆ, ಮಾ. 17: ಪೊನ್ನಂಪೇಟೆ ಕ್ರೀಡಾ ವಸತಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭ ಸೋಮವಾರಪೇಟೆ ತಾಲೂಕಿನ ವಿದ್ಯಾರ್ಥಿಗಳಿಗೆ ಅನ್ಯಾಯವೆಸಗಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾ ವಸತಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭ, ಕ್ರೀಡಾ ಕೌಶಲ್ಯ, ದೇಹದಾಢ್ರ್ಯತೆ, ಚಾಕಚಕ್ಯತೆಗಳನ್ನು ಕಡೆಗಣಿಸಲಾಗಿದೆ. ಆಯ್ಕೆಯಾಗ ಬೇಕಾದ ಅಭ್ಯರ್ಥಿಗಳ ಬದಲಿಗೆ ಯಾವದೇ ಅರ್ಹತೆಯಿಲ್ಲದೆ ಶಿಫಾರಸು ಮೂಲಕ ಬಂದವರಿಗೆ ಅವಕಾಶ ನೀಡಲಾಗಿದೆ. ಅದರಲ್ಲೂ ಸೋಮವಾರಪೇಟೆ ತಾಲೂಕಿನಲ್ಲಿ ಕೇವಲ ಓರ್ವ ವಿದ್ಯಾರ್ಥಿಯನ್ನು ಆಯ್ಕೆ ಮಾಡಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಶಿಫಾರಸುಗಳ ಮೂಲಕ ಆಯ್ಕೆ ಮಾಡಿದರೆ ಅರ್ಹತೆಯುಳ್ಳ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ತರಬೇತುದಾರರ ವರದಿಯನ್ನು ಸಂಪೂರ್ಣ ಕಡೆಗಣಿಸಿ ರಾಜಕೀಯ ಒತ್ತಡದ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪೋಷಕರಾದ ಕೆ.ಎಸ್. ರುದ್ರಪ್ಪ ಮತ್ತು ನಾಗೇಶ್ ದೂರಿದರು.
ವಿದ್ಯಾರ್ಥಿಗಳ ಆಯ್ಕೆ ಸಮರ್ಪಕವಾಗಿಲ್ಲ. ಮರು ಆಯ್ಕೆ ಪ್ರಕ್ರಿಯೆ ಕೈಗೊಳ್ಳಬೇಕೆಂದು ಇತ್ತೀಚೆಗೆ ನಡೆದ ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಯಾವದೇ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳಿಗೂ ಪುಕಾರು ನೀಡಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀಬಾಯಿ ಅವರನ್ನು ಅಮಾನತ್ತುಗೊಳಿಸಬೇಕು. ಜಿಲ್ಲಾ ಪಂಚಾಯಿತಿ ಕ್ರೀಡಾ ಸ್ಥಾಯಿ ಸಮಿತಿ ಅಧ್ಯಕ್ಷರೂ ಕೂಡ ಆಯ್ಕೆ ಪ್ರಕ್ರಿಯೆ ಸಂದರ್ಭ ರಾಜಕೀಯ ನುಸುಳುವಂತೆ ಮಾಡಿದ್ದಾರೆ ಎಂದು ಗೋಷ್ಠಿಯಲ್ಲಿದ್ದ ಪೋಷಕರು ಆರೋಪಿಸಿದರು.
ಮುಂದಿನ ಐದು ದಿನಗಳ ಒಳಗಾಗಿ ಅನ್ಯಾಯವಾಗಿರುವ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಕರವೇ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಪೋಷಕರಾದ ಜಗದೀಶ್, ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ಗೌರವ ಅಧ್ಯಕ್ಷ ಗಿರೀಶ್ ಉಪಸ್ಥಿತರಿದ್ದರು.