ಗೋಣಿಕೊಪ್ಪ ವರದಿ, ಮಾ. 17: ಕೊರೊನಾ ವೈರಸ್ ಮುಂಜಾಗ್ರತೆ ಸಲುವಾಗಿ ವೀರಾಜಪೇಟೆ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಕೊಡಗು-ಕೇರಳ ಗಡಿಭಾಗ ಮಾಕುಟ್ಟದಲ್ಲಿ ಜಾಗೃತಿ ಮೂಡಿಸಲಾಯಿತು.

ವೈರಸ್ ಹರಡುವ ವಿಧಾನ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ, ರೋಗದ ಗುಣಲಕ್ಷಣಗಳನ್ನು ತಿಳಿಸಿ, ಪ್ರಯಾಣಿಕರಿಗೂ ಮಾಹಿತಿ ನೀಡಲಾಯಿತು. ವಿದೇಶದಿಂದ ಬಂದವರು ಮಾಹಿತಿ ನೀಡಿ, ತಮ್ಮ ಮನೆಯಲ್ಲಿಯೇ ಉಳಿದುಕೊಳ್ಳುವುದು ಸೂಕ್ತ ಎಂದು ವೀರಾಜಪೇಟೆ ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಮನವಿ ಮಾಡಿದ್ದಾರೆ. ಬೇರೆ ಬೇರೆ ಸಾರ್ವಜನಿಕ, ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚು ತೊಂದರೆಯಾಗಲಿದೆ. ಇದನ್ನು ಅರಿತು ತಮ್ಮ ಮನೆಯಲ್ಲಿಯೇ 14 ದಿನಗಳ ಕಾಲ ಉಳಿಯಬೇಕು. ಆರೋಗ್ಯದಲ್ಲಿ ತೊಂದರೆಯಾದರೆ ಸ್ಥಳೀಯ ವೈದ್ಯರಲ್ಲಿ ಸಲಹೆ ಪಡೆಯಬೇಕು. ಯಾವ ಕಾರಣಕ್ಕೂ ಮನೆಯಿಂದ ಹೊರ ಹೋಗದಂತೆ ಮನವಿ ಮಾಡಿದ್ದಾರೆ.