ಮಡಿಕೇರಿ, ಮಾ. 17: ಮಂಗಳೂರಿನ ಕಾಪೋರೇಷನ್ ಬ್ಯಾಂಕ್ ಅಧಿಕಾರಿಗಳ ಸಂಘಟನೆ ವತಿಯಿಂದ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ ಬಾಲಚಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಳೆದ 30 ವರ್ಷಗಳಿಂದ ಸ್ಮರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಇನ್ನಿತರ ಪರೀಕ್ಷೆಗಳಿಗೆ ಮೂರುವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಸತತ ಪರಿಶ್ರಮ, ಪ್ರಯತ್ನದಿಂದ ಸಾಧನೆ ಸಾಧ್ಯ. ನಿರಂತರವಾಗಿ ಶ್ರಮ ವಹಿಸಿ ಕಲಿಯಬೇಕು ಎಂದು ಕರೆ ನೀಡಿದರು. ಸನ್ಮಾನ ಸಂದರ್ಭ ರಾಮಕೃಷ್ಣ ಆಶ್ರಮದ ಎಕಗಮ್ಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸ್ಮಾರ್ಟ್ ಸಿಟಿ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್, ಸಂಘಟನೆಯ ಅಧ್ಯಕ್ಷ ವೈ ಸುಧೀಂದ್ರ, ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.