ಸೋಮವಾರಪೇಟೆ, ಮಾ. 17: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷ ಮೋಹನ್ ಅವರ ಅಧ್ಯಕ್ಷತೆಯಲ್ಲಿ ಸ್ಥಳಿಯ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಸಂಘಕ್ಕೆ ಸ್ವಂತ ನಿವೇಶನ ಮತ್ತು ಕಟ್ಟಡವನ್ನು ಹೊಂದಿ ಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಕಾರ್ಯದರ್ಶಿ ಹೆಚ್.ಕೆ. ಗಂಗಾಧರ್ ಈ ಬಗ್ಗೆ ಮಾತನಾಡಿ, ಸಂಘದ ವತಿಯಿಂದ ಈಗಾಗಲೇ ಜಿಲ್ಲಾಧಿಕಾರಿ ಗಳನ್ನು ಭೇಟಿಯಾಗಿ ಚರ್ಚಿಸಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಪೈಸಾರಿ ಜಾಗವಿದ್ದಲ್ಲಿ ಗುರುತಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿ ದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮವಹಿಸಲಾಗುವದು ಎಂದರು. ಸಂಘದ ವತಿಯಿಂದ ಸ್ಥಾಪಿಸಿರುವ ಮರಣನಿಧಿಯನ್ನು ರೂ. 15 ಸಾವಿರಕ್ಕೆ ಏರಿಸಲಾಗಿದೆ. ಸದಸ್ಯರ ಚಿಕಿತ್ಸಾ ವೆಚ್ಚವನ್ನು 3 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ನೂತನವಾಗಿ ಸಂಘದ ಸದಸ್ಯತ್ವ ಪಡೆಯುವವರು 7 ಸಾವಿರ ನೀಡಬೇಕಿದೆ ಎಂದು ಅಧ್ಯಕ್ಷ ಮೋಹನ್ ಸಭೆಗೆ ತಿಳಿಸಿದರು.

ಕಳೆದ ಕೆಲ ತಿಂಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಆಟೋ ಚಾಲಕ, ಗೋಣಿಮರೂರು ಗ್ರಾಮದ ಸಚಿನ್ ಅವರ ಕುಟುಂಬಕ್ಕೆ, ಸಂಘದ ವತಿಯಿಂದ ನೀಡಲಾಗುವ ಗುಂಪುವಿಮೆ ಪರಿಹಾರ-ರೂ.1 ಲಕ್ಷದ ಚೆಕ್‍ನ್ನು, ಸಚಿನ್ ಅವರ ಪೋಷಕರಾದ ಸುವರ್ಣ ಮತ್ತು ಪರಶಿವ ಅವರುಗಳಿಗೆ ಹಸ್ತಾಂತರಿಸಲಾಯಿತು.

ಸಭೆಯ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಫಾರೂಕ್, ಐಗೂರು ಘಟಕದ ಅಧ್ಯಕ್ಷ ಅಪ್ಪು, ತಾಲೂಕು ಪದಾಧಿಕಾರಿಗಳಾದ ದಾಮೋದÀರ್, ಮಹಮ್ಮದ್ ಶಫಿ, ಜನಾರ್ಧನ್, ಕೃಷ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.