ಮಡಿಕೇರಿ, ಮಾ. 17: ನಗರದ ಓಂಕಾರೇಶ್ವರ ದೇವಾಲಯದಲ್ಲಿ ತಾ. 20 ರಿಂದ 25 ರವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಪೂಜಾ ಕಾರ್ಯವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಯಿತು.

ನಗರದ ಓಂಕಾರೇಶ್ವರ ಸದನದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧ್ಯಕ್ಷತೆಯಲ್ಲಿ ಹಾಗೂ ಸಮಿತಿ ಅಧ್ಯಕ್ಷ ಪುಲಿಯಂಡ ಕೆ. ಜಗದೀಶ್ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯಾದ್ಯಂತ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಸರ್ಕಾರ ಹಲವು ನಿಬಂಧನೆಗಳನ್ನು ಹೇರಿದ್ದು, ಅದರಂತೆ ಕಾರ್ಯಕ್ರಮ ಆಯೋಜಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು. ಜಿಲ್ಲಾಡಳಿತ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ವೈರಸ್ ಲಕ್ಷಣಗಳು ಮತ್ತೊಬ್ಬರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಿದೆ ಎಂದು ತಿಳಿಸಿದರು.

ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಅಗತ್ಯ ಪೊಲೀಸರನ್ನು ನಿಯೋಜಿಸುವುದು, ಮತ್ತಿತರ ಕಾರ್ಯವನ್ನು ಕೈಗೊಳ್ಳುವಂತೆ ಸಲಹೆ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಅವರು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ವೈದ್ಯರನ್ನು ನಿಯೋಜಿಸ ಲಾಗುವುದು. ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು. ಭಕ್ತಾದಿಗಳು ಸಹಕರಿಸಬೇಕಾಗಿ ಕೋರಿದರು.

ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಕೆ. ಜಗದೀಶ್ ಮಾತನಾಡಿ, ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳು ನಡೆಯಲಿವೆ. ಸರ್ಕಾರದ ನಿರ್ದೇಶನವನ್ನು ಪಾಲಿಸಬೇಕಿದ್ದು, ಅದರಂತೆ ನಡೆದುಕೊಳ್ಳಲಾಗುವುದು. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದರು.

ಸಭೆಯ ಬಳಿಕ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ದೇವಾಲಯಕ್ಕೆ ಭೇಟಿ ನೀಡಿ ದೇವಾಲಯ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರಿಂದ ಪೂಜಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಸಭೆಯಲ್ಲಿ ಓಂಕಾರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಜಗದೀಶ್ ಕುಮಾರ್, ಪಿ.ಹೆಚ್. ಸೀತಾ ಚಿಕ್ಕಣ್ಣ, ಕನ್ನಂಡ ಕವಿತಾ ಕಾವೇರಮ್ಮ, ಯು.ಸಿ. ದಮಯಂತಿ, ಟಿ.ಹೆಚ್. ಉದಯಶಂಕರ್, ಎ.ಎಸ್. ಪ್ರಕಾಶ್ ಆಚಾರ್ಯ, ಕುರಿಕಡ ಎ. ಆನಂದ್, ಸುನಿಲ್ ಕುಮಾರ್ ಕೆ. ಸೇರಿದಂತೆ ಇತರರು ಇದ್ದರು.