ಕ್ರಿಕೆಟ್ ಆಟವು ಆಟಗಳ ರಾಜ ಎಂದೆನ್ನಿಸಿಕೊಂಡಿದೆ. ಕ್ರಿಕೆಟ್ ಆಟವನ್ನು ಮೂಲತಃ ಪ್ರಾರಂಭಿಸಿದವರು ‘ಜ್ಯೂ’ ಜನಾಂಗದವರು ಕ್ರಿ.ಶ. 400ರ ಸುಮಾರಿಗೆ ಈ ಆಟವು ಇಂಗ್ಲೆಂಡಿನಲ್ಲಿ ಜನಜನಿತವಾಯಿತು. ಕ್ರಿಕೆಟ್‍ನ ತವರೂರು ಇಂಗ್ಲೆಂಡ್ ಆಯಿತು. ಬ್ರಿಟಿಷರು ತಮ್ಮ ಆದಿಪತ್ಯಕ್ಕೊಳಪಟ್ಟ ಎಲ್ಲಾ ರಾಷ್ಟ್ರಗಳಲ್ಲೂ ಈ ಆಟವನ್ನು ಹರಡಿದರು. ಮೊದಮೊದಲು ರಾಜ ಮನೆತನದವರು ಹಾಗೂ ಗಣ್ಯವ್ಯಕ್ತಿಗಳು ಮಾತ್ರ ಈ ಆಟವನ್ನು ಆಡುತ್ತಿದ್ದರು. ಕಮ್ಯೂನಿಷ್ಟ್ ರಾಷ್ಟ್ರಗಳಲ್ಲಿ ಇದು ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. ಇದೀಗ 2-3 ದಶಕಗಳಿಂದ ಆರಂಭವಾದ ಒಂದು ದಿನದ ಲಿಮಿಟೆಡ್ ಓವರ್‍ಗಳ ಪಂದ್ಯಾಟ, ಚುಟುಕು ಕ್ರಿಕೆಟ್ 20-20 ಓವರ್‍ಗಳ ಪಂದ್ಯಗಳು ಕ್ರಿಕೆಟ್ ಆಸಕ್ತಿಯನ್ನು ಬದಲಿಸಿ ಬಿಟ್ಟಿದೆ. ಇಂದು ಕ್ರಿಕೆಟ್ ಜನಪ್ರಿಯ ಆಟವಾಗಿ ಜನಾಕರ್ಷಣೆ ಪಡೆದಿದೆ. ಶ್ರೀಮಂತರ ಆಟ ಎಂದು ಈ ಹಿಂದೆ ಅನ್ನಿಸಿದರೂ ಇದೀಗ ಸಾಮಾನ್ಯರು ಈ ಆಟದಲ್ಲಿ ಪಾಲ್ಗೊಳ್ಳುವರು. ಈ ಕ್ರೀಡೆ ಆಟಗಾರರಿಗೆ ಹಾಗೂ ಸಂಸ್ಥೆಗೆ ಹೆಚ್ಚಿನ ಆದಾಯವನ್ನು ತಂದು ಕೊಡುವ ಕ್ರೀಡೆಯಾಗಿದೆ.

ಈ ಕ್ರಿಕೆಟ್ ಆಟದಲ್ಲಿ ಟೂರ್ನಿಗಳು, ಇನ್ನಿತರ ಕ್ರೀಡೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ನಿಯಂತ್ರಿಸಿ, ರೂಪುರೇಷೆ ಕೊಡಲು ವಿಶ್ವಮಟ್ಟದಲ್ಲಿ ಸಂಸ್ಥೆಯೊಂದರ ಅಗತ್ಯವಿದ್ದು, ಅದೇ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಾಗಿ ರೂಪುಗೊಂಡಿತು. ಕ್ರಿಕೆಟ್ 16ನೇ ಶತಮಾನದಲ್ಲಿ ಪ್ರಾರಂಭಗೊಂಡು, 18ನೇ ಶತಮಾನದಲ್ಲಿ ಅಂತರರಾಷ್ಟ್ರೀಯ ಕ್ರೀಡೆಯಾಗಿ ರೂಪುಗೊಂಡಿತು. ಕ್ರಿಕೆಟ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ರಾಷ್ಟ್ರೀಯ ಕ್ರೀಡೆಯಾಗಿದೆ. ಮೊದಲ ಅಂತರ್ರಾಷ್ಟ್ರೀಯ ಏಕದಿನ ಮತ್ತು ಮೊದಲ ಎರಡು ವಿಶ್ವಕಪ್ ಪಂದ್ಯಗಳು 60 ಓವರ್‍ಗಳಲ್ಲಿ ಜರುಗಿತು. ಮೊದಲ ವಿಶ್ವಕಪ್ ಕ್ರಿಕೆಟ್ ಪಂದ್ಯ 1975ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆಯಿತು.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು 1909ರಲ್ಲಿ ಜೂನ್ 15 ರಂದು ಸ್ಥಾಪನೆಯಾಯಿತು. 1909ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಪ್ರತಿನಿಧಿಗಳನ್ನೊಳಗೊಂಡ ಇಂಪೀರಿಯಲ್ ಕ್ರಿಕೆಟ್ ಕಾನ್‍ಫರೆನ್ಸ್ ಎಂಬ ಹೆಸರಿನ ಸಂಸ್ಥೆಯಾಗಿ ಸ್ಥಾಪನೆಯಾಯಿತು. 1965ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪರಿಷತ್ ಎಂದು ಮರುನಾಮಕರಣಗೊಂಡಿತು. ನಂತರ 1989ರಲ್ಲಿ ಪ್ರಸ್ತುತ ಹೆಸರಾದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಾಗಿ ಮತ್ತೊಮ್ಮೆ ಮರುನಾಮಕರಣ ಗೊಂಡಿತು. ಆನಂತರ 1989ರಲ್ಲಿ ಪ್ರಸ್ತುತ ಹೆಸರಾದ ಅಂತರ್ರಾಷ್ಟ್ರೀಯ ಮಂಡಳಿಯಾಗಿ ಮತ್ತೊಮ್ಮೆ ಮರುನಾಮಕರಣಗೊಂಡಿತು.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಅಧಿಕೃತ ಟೆಸ್ಟ್ ಪಂದ್ಯಗಳನ್ನು ಆಡುವ 10 ಪೂರ್ಣ ಪ್ರಮಾಣದ ಸದಸ್ಯರುಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ತಂಡಗಳನ್ನು ಒಳಗೊಂಡಿದ್ದು, 39 ಸಹಾಯಕ ಸದಸ್ಯರನ್ನು ಮತ್ತು 56 ಮಾನ್ಯತೆ ಪಡೆದ ಸದಸ್ಯರನ್ನು ಒಳಗೊಂಡಂತೆ ಒಟ್ಟು 105 ಸದಸ್ಯರನ್ನು ಹೊಂದಿದೆ. ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧಿಕೃತ ಭಾಷೆ ಇಂಗ್ಲೀಷ್ ಆಗಿದ್ದು ಇದರ ಪ್ರಧಾನ ಕಚೇರಿಯು ದುಬೈನಲ್ಲಿ ಕಾರ್ಯನಿರ್ವಹಿಸುತ್ತಿದೆ ಐಸಿಸಿಯಲ್ಲಿ ಕ್ರಿಕೆಟ್ ಅಭಿವೃದ್ಧಿಗಾಗಿ ಅನೇಕ ಕಾರ್ಯ ನಿರ್ವಹಿಸಿದ್ದಾರೆ. ಕ್ರಿಕೆಟ್‍ನ ಅಂತಿಮ ಶಕ್ತಿ ಕೇಂದ್ರವು ಐ.ಸಿ.ಸಿ. ಆಗಿದ್ದು, ಇತರ ದೇಶಗಳ ಕ್ರಿಕೆಟ್ ಸಂಸ್ಥೆಗಳ ಮೇಲೆ ಹಿಡಿತ ಹೊಂದಿರುತ್ತದೆ. ಕ್ರಿಕೆಟ್‍ನ ಆಗು-ಹೋಗುಗಳು ವಿಶ್ವ ಮಟ್ಟದಲ್ಲಿ ಜರುಗುವಾಗ ಅದನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಐ.ಸಿ.ಸಿ. ಹೊರುವದು.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿಯಾದ ವಿಶ್ವಕಪ್ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಪಂದ್ಯಾವಳಿಗಳನ್ನು ವ್ಯವಸ್ಥಿತವಾಗಿ ಸಂಘಟಿಸುತ್ತಾ ಬಂದಿದೆ. ಇದಲ್ಲದೆ ಟೆಸ್ಟ್ ಪಂದ್ಯಗಳಿಗೆ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಿಗೆ ಮತ್ತು 20-20 ಚುಟುಕು ಕ್ರಿಕೆಟ್ ಪಂದ್ಯಗಳಿಗೆ ನಿರ್ಣಾಯಕರನ್ನು ನೇಮಿಸುವ ಅಧಿಕಾರವನ್ನು ಹೊಂದಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಪ್ರತಿಷ್ಠಿತ ಟೂರ್ನಿಗಳನ್ನು ನಡೆಸುವದರ ಜೊತೆಗೆ ಕ್ರಿಕೆಟ್‍ನಲ್ಲಿ ಶಿಸ್ತು ವೃತ್ತಿಪರ ಗುಣಮಟ್ಟ ಅಂತರರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರ ಮತ್ತು ಮ್ಯಾಚ್‍ಫಿಕ್ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕಗಳ ಮೂಲಕ ಪ್ರಚಾರ ಪಡಿಸುತ್ತದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಸಂಘಟಿಸುವಂತಹ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳು ಐ.ಸಿ.ಸಿ. ಟೆಸ್ಟ್ ಚಾಂಪಿಯನ್‍ಶಿಪ್, ಐ.ಸಿ.ಸಿ. ಇಂಟರ್‍ಕಾಂಟಿನೆಂಟಲ್ ಕಪ್, ಐ.ಸಿ.ಸಿ. ಏಕದಿನ ಅಂತರರಾಷ್ಟ್ರೀಯ ಪಂದ್ಯಾವಳಿ, ಐ.ಸಿ.ಸಿ. ವಿಶ್ವಕಪ್, ಐ.ಸಿ.ಸಿ. ಮಹಿಳಾ ವಿಶ್ವಕಪ್ ಕ್ರಿಕೆಟ್ ಐ.ಸಿ.ಸಿ. ಚಾಂಪಿಯನ್‍ಶಿಪ್‍ಟ್ರೋಫಿ, ಐ.ಸಿ.ಸಿ. ವಿಶ್ವಕ್ರಿಕೆಟ್‍ಲೀಗ್, ವಿಶ್ವಕಪ್ ಅರ್ಹತಾ ಸುತ್ತು, ಐ.ಸಿ.ಸಿ. ವಿಶ್ವ ಟ್ವೆಂಟಿ-20, ಐ.ಸಿ.ಸಿ. ಮಹಿಳಾ ವಿಶ್ವಕಪ್ 20-20, ಐ.ಸಿ.ಸಿ. ವಿಶ್ವ ಟ್ವೆಂಟಿ-20 ಅರ್ಹತಾ ಸುತ್ತು. ಕ್ರಿಕೆಟ್‍ನಂತಹ ವಿಶ್ವದಲ್ಲೇ ಹೆಚ್ಚು ವೀಕ್ಷಕರನ್ನು ಹೊಂದಿರುವ ಕ್ರೀಡೆ ಹಬ್ಬದ ರೀತಿ ಹಲವು ದೇಶಗಳಲ್ಲಿ ನಡೆಯುತ್ತಿರುವಾಗ ನಿಯಂತ್ರಣಕ್ಕೆ ಐ.ಸಿ.ಸಿ. ಸಂಸ್ಥೆ ಬಹುಮುಖ್ಯ. ಭಾರತೀಯರು ಐ.ಸಿ.ಸಿ.ಯ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಬಿಸಿಸಿಐ ವಿಶ್ವದ ಅತೀ ಶ್ರೀಮಂತ ಕ್ರೀಡಾ ಸಂಸ್ಥೆ ಎನ್ನಿಸಿದೆ. ವಿಶ್ವ ಮಟ್ಟದಲ್ಲಿ ಪ್ರಭಾವಿಯು ಆಗಿದೆ. ಭಾರತ ಕ್ರಿಕೆಟ್‍ನಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಿದೆ.

ಒಟ್ಟಿನಲ್ಲಿ ಕ್ರಿಕೆಟ್ ಕ್ರೀಡೆಗೆ ಶಿಸ್ತು, ವೃತ್ತಿಪರತೆ, ಘನತೆ ತಂದು ಕೊಡುವಲ್ಲಿ, ಕ್ರೀಡೆಯ ಬೆಳವಣಿಗೆಗೆ ಐ.ಸಿ.ಸಿ. ದೊಡ್ಡ ಮಟ್ಟದಲ್ಲೇ ಕೊಡುಗೆ ನೀಡುತ್ತಿದೆ. ಇಂಟರ್‍ನ್ಯಾಶನಲ್ ಕ್ರಿಕೆಟ್ ಕೌನ್ಸಿಲ್ ಮುಂದೆ ಕ್ರಿಕೆಟ್ ಇನ್ನೂ ಹೆಚ್ಚು ಬೆಳೆಯುವಲ್ಲಿ ಸಹಕಾರಿಯಾಗಲಿ.

-ಹರೀಶ್‍ಸರಳಾಯ,

ಮಡಿಕೇರಿ.