ಗೋಣಿಕೊಪ್ಪಲು, ಮಾ. 17: ದ. ಕೊಡಗಿನ ಬಾಳೆಲೆ ಹೋಬಳಿಯ ಕೊಟ್ಟಗೇರಿ ಗ್ರಾಮದ ರೈತ ಪಾಪಂಗಡ ಸಜನ್ ತಮ್ಮ ಭತ್ತದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿದೆ. ದಾಳಿಯ ವೇಳೆ ಹಸುವು ಕಿರುಚಿಕೊಂಡಾಗ ಸಮೀಪದಲ್ಲಿದ್ದ ಕಾರ್ಮಿಕರು ಬೊಬ್ಬೆ ಹಾಕಿದಾಗ ಹಸುವನ್ನು ಗಂಭೀರ ಸ್ವರೂಪದ ಗಾಯಗೊಳಿಸಿ ಸ್ಥಳದಲ್ಲೆ ಬಿಟ್ಟು ಹೋಗಿದೆ. ಸಂಜೆ ನಾಲ್ಕು ಗಂಟೆಯ ಸಮಯದಲ್ಲಿ ಇದೇ ಹುಲಿಯು ದೇವನೂರು ಗ್ರಾಮದ ಮಾಣಿಪಂಡ ಪಾರ್ಥ (ವಿವೇಕ್) ಎಂಬವರ ಭತ್ತದ ಗದ್ದೆಗೆ ತೆರಳಿದ್ದು, ಗದ್ದೆಯಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ದಾಳಿ ಮಾಡಿ ಸಾಯಿಸಿದೆ.ಹುಲಿಯ ಘರ್ಜನೆ ಸದ್ದು ಕೇಳಿ ಸಮೀಪದಲ್ಲಿ (ಮೊದಲ ಪುಟದಿಂದ) ಕೆಲಸ ಮಾಡುತ್ತಿದ್ದ ಕಾರ್ಮಿಕರು ಬಂದು ನೋಡುವಷ್ಟರಲ್ಲಿ ಹಸುವು ಮೃತಪಟ್ಟಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರಮಣಮಾಡ ರಂಜನ್ ಚಂಗಪ್ಪ ಹಾಗೂ ಗ್ರಾಮಸ್ಥರು ತಿತಿಮತಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಎಸಿಎಫ್ ಶ್ರೀಪತಿ, ಆರ್‍ಎಫ್‍ಓ ಅಶೋಕ್ ಹುನಗುಂದ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಘಟನೆ ಸ್ಥಳದಲ್ಲಿ ಹುಲಿಯ ಸೆರೆಗೆ ಬೋನನ್ನು ಇಡುವ ವ್ಯವಸ್ಥೆ ಮಾಡಿದರು. ಪರಿಹಾರ ನೀಡುವ ಭರವಸೆ ನೀಡಿದರು.

ಕಳೆದ ಮೂರು ದಿನಗಳ ಹಿಂದೆ ಸಮೀಪದ ಪಾಸುರ ಕಾಶಿ ಎಂಬವರ ಗದ್ದೆಯಲ್ಲಿ ಹುಲಿಯು ಕಂಡುಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಂಜೆಯ ವೇಳೆಯಲ್ಲಿ ಹುಲಿಯನ್ನು ಸೆರೆಹಿಡಿದು ಮೈಸೂರಿಗೆ ಚಿಕಿತ್ಸೆಗಾಗಿ ಸಾಗಿಸಿದ್ದರು. ಆದರೆ ಹುಲಿಯು ಮೃತಪಟ್ಟಿತ್ತು.

ಈ ಹುಲಿಯು ಸೆರೆ ಆದ ಸಂದರ್ಭ ಇಲ್ಲಿನ ರೈತರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿಯಾಯಿತ್ತು. ಆದರೆ, ಇದೀಗ ಮತ್ತೊಂದು ಹುಲಿಯು ತನ್ನ ಬೇಟೆ ಆರಂಭಿಸಿ ರೈತರ ಜಾನುವಾರುಗಳನ್ನು ಕೊಂದು ಹಾಕುತ್ತಿದೆ. ಇದರಿಂದಾಗಿ ಈ ಭಾಗದ ಗ್ರಾಮಸ್ಥರಲ್ಲಿ ಸಹಜವಾಗಿಯೇ ಆತಂಕ ಎದುರಾಗಿದೆ.